ಜೈನಮುನಿ ಹತ್ಯೆ ಪ್ರಕರಣ: ತನಗೆ ಪಾಪಪ್ರಜ್ಞೆ ಕಾಡುತ್ತಿದೆ, ನನ್ನನ್ನು ಸಾಯಿಸಿ, ಇಲ್ಲ ನಾನೇ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದ ಆರೋಪಿ
Wednesday, July 12, 2023
ಬೆಳಗಾವಿ: ರಾಷ್ಟ್ರಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಚಿಕ್ಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಹತ್ಯೆ ಪ್ರಕರಣದ ಆರೋಪಿ ನಾರಾಯಣ ಮಾಳಿ ಜೈನ ಮುನಿಯನ್ನು ಹತ್ಯೆ ಮಾಡಿರುವ ತನಗೀಗ ಪಾಪಪ್ರಜ್ಞೆ ಕಾಡುತ್ತಿದೆ. ನನ್ನಿಂದ ತಪ್ಪಾಗಿದೆ ನೀವೆ ನನ್ನನ್ನು ಸಾಯಿಸಿ, ಇಲ್ಲ ನಾನೇ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಳ್ಳುವೆ" ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊದಲ ಆರೋಪಿ ನಾರಾಯಣ ಮಾಳಿ ತನಗೆ ಪಾಪ ಪ್ರಜ್ಞೆ ಕಾಡುತ್ತಿದೆ ಎಂದು ಹೇಳುತ್ತಿದ್ದಾನೆಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಬಂಧಿತಇಬ್ಬರು ಆರೋಪಿಗಳಾದ ನಾರಾಯಣ ಮಾಳಿ, ಹಸನ್ ದಲಾಯತ್ರನ್ನು ಚಿಕ್ಕೋಡಿ ಠಾಣೆ ಪೊಲೀಸರು ಜುಲೈ 17ರವರೆಗೆ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆರೋಪಿ ನಾರಾಯಣ ಮಾಳಿ “ನಂದು ತಪ್ಪಾಯ್ತು ನೀವೆ ನನ್ನ ಸಾಯಿಸಿ, ಇಲ್ಲ ನಾನೇ ಆತ್ಮಹತ್ಯೆ ಗುಂಡು ಹಾರಿಸಿ ಸಾಯಿಸಿ, ಇಲ್ಲ ಮಾಡಿಕೊಳ್ಳುವೆ" ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಅದಲ್ಲದೇ ಆತ ಜೈನ ಮುನಿಗಳ ವೈಯಕ್ತಿಕ ಡೈರಿಯನ್ನು ಸುಟ್ಟು ಹಾಕಿದ್ದಾನೆ ಎಂದು ಹೇಳಿದ್ದಾನೆ. ಆದರೆ, ಜೈನಮುನಿಗಳ ಡೈರಿಯಲ್ಲಿ ಏನಿತ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಮುನಿಗಳ ಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಡೈರಿ ನಾಪತ್ತೆಯಾಗಿರುವ ಬಗ್ಗೆಯೂ ಆರೋಪಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮುನಿಗಳ ಜೊತೆ ಆರೋಪಿಗಳು ಯಾವ ರೀತಿ ಸಂಭಾಷಣೆ ಮಾಡಿದ್ದಾರೆ. ಎಂಬುದನ್ನು ಪೊಲೀಸರು ಕಂಡುಕೊಳ್ಳುತ್ತಿದ್ದಾರೆ.
ಇದರೊಂದಿಗೆ ಆರೋಪಿ ನಾರಾಯಣ ಮಾಳಿ ಮನೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಭದ್ರತೆ ಹಿನ್ನೆಲೆ ನಾರಾಯಣ ಮಾಳಿ ಕುಟುಂಬಸ್ಥರನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ನಾರಾಯಣ ಮಾಳಿ ಮನೆಯಲ್ಲಿರುವ 30ಕ್ಕೂ ಅಧಿಕ ಜಾನುವಾರುಗಳನ್ನು ಪೊಲೀಸರೇ ಆರೈಕೆ ಮಾಡುತ್ತಿದ್ದಾರೆ.
ಪೊಲೀಸ್ ಸಿಬ್ಬಂದಿಯೇ ಹೊಲದಲ್ಲಿನ ಮೇವು ಕತ್ತರಿಸಿ ಎರಡು ಆಕಳು, ಎರಡು ಎಮ್ಮೆ 20ಕ್ಕೂ ಹೆಚ್ಚು ಮೇಕೆಗಳಿಗೆ ಹಾಕುತ್ತಿದ್ದಾರೆ. ನಾವು ಸಹ ರೈತರ ಮಕ್ಕಳೇ ಮಾನವೀಯತೆ ದೃಷ್ಟಿಯಿಂದ ಜಾನುವಾರುಗಳಿಗೆ ಮೇವು ಹಾಕುತ್ತಿದ್ದೇವೆ. ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಈ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ