ವರದಕ್ಷಿಣೆಯಾಗಿ ಕಾರು ಕೊಡಿಸಿಲ್ಲವೆಂದು ವಿವಾಹವಾದ ಎರಡೇ ಗಂಟೆಗಳಲ್ಲಿ ಮೂರು ತಲಾಖ್ ಹೇಳಿದ ವರ
Saturday, July 15, 2023
ಆಗ್ರಾ: ವರದಕ್ಷಿಣೆಯಾಗಿ ಕಾರು ಕೊಡಲಿಲ್ಲವೆಂದು ವರನೋರ್ವನು ಮದುವೆಯಾದ ಎರಡೇ ಗಂಟೆಯಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಇದೀಗ ವಧುವಿನ ಸಹೋದರ ನೀಡಿರುವ ದೂರಿನ ಮೇರೆಗೆ ಪೊಲೀಸರು ವರ ಮೊಹಮ್ಮದ್ ಆಸಿಫ್ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಕಮ್ರಾನ್ ವಾಸಿ ನನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೌರಿಗೆ ಒಂದೇ ದಿನ ಮದುವೆ ನಿಶ್ಚಯ ಮಾಡಲಾಗಿತ್ತು. ಮದುವೆಯಾದ ಬಳಿಕ ಗೌರಿ ತನ್ನ ಪತಿ ಮನೆಯವರೊಂದಿಗೆ ಹೋಗಿದ್ದಾಳೆ. ಆದರೆ ಡಾಲಿಯ ಪತಿ ಮೊಹಮ್ಮದ್ ಆಸಿಫ್ ತನಗೆ ವರದಕ್ಷಿಣೆಯಲ್ಲಿ ಕಾರು ಕೊಡಲಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ.
ಅಲ್ಲದೆ ವರನ ಕಡೆಯವರೂ ಇದೇ ವಿಚಾರದಲ್ಲಿ ತಗಾದೆ ತೆಗೆದು ಕಾರನ್ನು ಕೊಡಿಸುವಂತೆ ಕೇಳಿದ್ದಾರೆ. ಇಲ್ಲವಾದಲ್ಲಿ ತಕ್ಷಣವೇ ಐದು ಲಕ್ಷ ರೂ. ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಮಯ ಕೇಳಿದ್ದಕ್ಕಾಗಿ ಕುಪಿತಗೊಂಡ ಆತನ ಕುಟುಂಬಸ್ಥರು ಸ್ಥಳದಲ್ಲಿಯೇ ವರನ ಕಡೆಯಿಂದ ಮೂರು ಬಾರಿ ತಲಾಖ್ ಹೇಳಿಸಿ ಹೊರಟು ಹೋಗಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ವರ ಮೊಹಮ್ಮದ್ ಅಸಿಫ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ ಎಂದು ವಧುವಿನ ಸಹೋದರ ಕಮ್ರಾನ್ ವಾಸಿ ತಿಳಿಸಿದ್ದಾರೆ.