-->
ಹುಡುಗಿಯರ ಶೋಕಿಗಾಗಿ, ಮೋಜಿನ‌ ಲೈಫಿಗಾಗಿ ಕಳವು: ಆರೋಪಿ ಅಂದರ್

ಹುಡುಗಿಯರ ಶೋಕಿಗಾಗಿ, ಮೋಜಿನ‌ ಲೈಫಿಗಾಗಿ ಕಳವು: ಆರೋಪಿ ಅಂದರ್

ಬೆಂಗಳೂರು: ಯಾರೂ ಇಲ್ಲದ ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಮುಂಜಾನೆ ವೇಳೆ ಬಾಗಿಲು ಮುರಿದು ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ಪುರದ ದೇವಸಂದ್ರ ನಿವಾಸಿ ರಫೀಕ್ ಅಲಿಯಾಸ್ ಸೇಟಿ(29) ಬಂಧಿತ ಆರೋಪಿ.

ಪೊಲೀಸರು ವಿಚಾರಣೆ ಮಾಡಿದಾಗ ಈತನಲ್ಲಿ 22.08 ಲಕ್ಷ ರೂ. ಮೌಲ್ಯದ 409 ಗ್ರಾಂ ತೂಕದ ಚಿನ್ನಾಭರಣ, 425 ಗ್ರಾಂ ತೂಕದ ಬೆಳ್ಳಿ ಆಭರಣ, 189 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಈತ ಪ್ರಕಾಶನಗರದ ದಿನಸಿ ಅಂಗಡಿಯ ರೋಲಿಂಗ್ ಶೆಟರ್ ನ ಬೀಗ ಮುರಿದು 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದನು. ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ರಫೀಕ್ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಬೆಂಗಳೂರು ನಗರದ ಪೀಣ್ಯ, ಗಿರಿನಗರ, ಕಬ್ಬನ್ ಪಾರ್ಕ್, ಕೆ.ಆರ್.ಪುರಂ, ಬನಶಂಕರಿ, ಕೆ.ಜಿ.ಹಳ್ಳಿ, ಚಂದ್ರಾಲೇಔಟ್ ಹಾಗೂ ಚಿಕ್ಕಮಗಳೂರು ನಗರ, ಚಿತ್ರದುರ್ಗ, ಮಂಡ್ಯ, ನೆಲಮಂಗಲ, ತಿಪಟೂರು ಪೊಲೀಸ್ ಠಾಣೆ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಮನೆಗಳವು ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದನು. ಬಳಿಕ ಜಾಮೀನು ಪಡೆದು ಹೊರಗೆ ಬಂದ ಬಳಿಕ ಮತ್ತೆ ಮನೆಗಳವು ಕೃತ್ಯಗಳಲ್ಲಿ ತೊಡಗಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. 

ಈತ ಪ್ರಕರಣವೊಂದರಲ್ಲಿ ಕಳೆದ ತಿಂಗಳಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ಆರೋಪಿ ರಫೀಕ್, ರಾಜಾಜಿನಗರ ಮತ್ತು ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಮನೆಗಳವು ಮಾಡಿದ್ದ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ 10ನೇ ವಯಸ್ಸಿನಿಂದಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಅಲ್ಲದೆ ದುಶ್ಚಟಗಳ ದಾಸನಾಗಿರುವ ಆತ ಮೋಜಿನ ಜೀವನಕ್ಕಾಗಿ ಸುಲಭವಾಗಿ ಹಣ ಗಳಿಸಲು ಮನೆಗಳವು ಕೃತ್ಯದಲ್ಲಿ ತೊಡಗುತ್ತಾನೆ. ಆರೋಪಿಗೆ ಹುಡುಗಿಯರ ಚಟವಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಗೆ ತೆರಳಿ ವೇಶ್ಯೆಯರ ಸಂಗ ಮಾಡುತ್ತಿದ್ದ. ಆರೋಪಿ ಇತ್ತೀಚೆಗೆ ರಾಜಾನಗರ ಹಾಗೂ ನೆಲಮಂಗಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತ ಮಾಡಿ ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ತೆರಳಿ ಶೋಕಿ ಮಾಡಿದ್ದ. ಆರೋಪಿ ಹಣ ಖಾಲಿಯಾಗುವವರೆಗೆ ಎಂಜಾಯ್ ಮಾಡಿ ಬಳಿಕ ಮತ್ತೆ ಮನೆಗಳವಿಗೆ ಇಳಿಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article