ಟೊಮ್ಯಾಟೊ ಮಾರಾಟ ಮಾಡಿ ಒಂದೇ ತಿಂಗಳಿಗೆ ಕೋಟ್ಯಾಧಿಪತಿಯಾದ ಮಹಾರಾಷ್ಟ್ರದ ರೈತ
Saturday, July 15, 2023
ಮುಂಬೈ: ದೇಶಾದ್ಯಂತ ಟೊಮ್ಯಾಟೊ ಬೆಲೆ ಗಗನಕುಸುಮವಾಗಿದೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಟೊಮೆಟೊ ಬೆಳೆದ ರೈತರೊಬ್ಬರಿಗೆ ಜಾಕ್ ಪಾಟ್ ಹೊಡೆದಿದೆ. ತುಕಾರಾಂ ಭಾಗೋಜಿ ಗಾಯಕರ್ ಹಾಗೂ ಅವರ ಕುಟುಂಬವು ಒಂದೇ ತಿಂಗಳಲ್ಲಿ 13,000 ಟೊಮೆಟೊ ಕ್ರೇಟ್ ಗಳನ್ನು ಮಾರಾಟ ಮಾಡುವ ಮೂಲಕ 1.5 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದೆ.
ತುಕಾರಾಂ 18 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಅದರಲ್ಲಿ 12 ಎಕರೆ ಜಮೀನಿನಲ್ಲಿ ತಮ್ಮ ಪುತ್ರ ಈಶ್ವರ್ ಗಾಯಕರ್ ಹಾಗೂ ಸೊಸೆ ಸೊನಾಲಿಯವರ ಸಹಾಯದಿಂದ ಟೊಮೆಟೊ ಕೃಷಿ ಮಾಡಿದ್ದಾರೆ. ನಾವು ಉತ್ತಮ ಗುಣಮಟ್ಟದ ಟೊಮ್ಯಾಟೊಗಳನ್ನು ಬೆಳೆಯುತ್ತೇವೆ. ರಸಗೊಬ್ಬರ ಹಾಗೂ ಕೀಟನಾಶಕಗಳ ಬಗ್ಗೆ ನಮ್ಮ ಜ್ಞಾನವು ಕೀಟಗಳಿಂದ ನಮ್ಮಬೆಳೆ ಸುರಕ್ಷಿತವಾಗಿಡಲು ಸಹಾಯ ಸಹಾಯ ಮಾಡುತ್ತದೆ ಎಂದು ಕುಟುಂಬದವರು ಹೇಳಿದರು.
ನಾರಾಯಣಗಂಜ್ ನಲ್ಲಿ ಒಂದು ಕ್ರೇಟ್ ಟೊಮೆಟೊ ಮಾರಾಟ ಮಾಡುವ ಮೂಲಕ ರೈತನೋರ್ವನು ದಿನಕ್ಕೆ 2,100 ರೂ. ಗಳಿಸುತ್ತಾನೆ. ಆದರೆ ಗಾಯಕರ್ ಶುಕ್ರವಾರ ಒಟ್ಟು 900 ಕ್ರೇಟ್ ಮಾರಾಟ ಮಾಡಿದ್ದು, ಒಂದೇ ದಿನದಲ್ಲಿ 18 ಲಕ್ಷ ರೂ. ಗಳಿಸಿದ್ದಾರೆ.
ಕಳೆದ ತಿಂಗಳು, ಅವರು ಗುಣಮಟ್ಟದ ಆಧಾರದ ಮೇಲೆ ಪ್ರತಿ ಕ್ರೇಟೆಗೆ 1,000 ರಿಂದ 2,400 ರೂ.ವರೆಗೆ ಟೊಮೆಟೊ ಕ್ರೇಟ್ ಗಳನ್ನು ಮಾರಾಟ ಮಾಡಲು ಸಾಧ್ಯವಾಯಿತು. ಪುಣೆ ಜಿಲ್ಲೆಯ ಜುನ್ನಾರ್ ನಲ್ಲಿ ಟೊಮ್ಯಾಟೊ ಬೆಳೆಯುತ್ತಿರುವ ಹಲವು ರೈತರು ಲಕ್ಷಾಧಿಪತಿಗಳಾಗಿದ್ದಾರೆ. ಟೊಮೆಟೊ ಮಾರಾಟದ ಮೂಲಕ ಸಮಿತಿಯು ಒಂದು ತಿಂಗಳಲ್ಲಿ 80 ಕೋಟಿ ರೂ. ವ್ಯವಹಾರ ಮಾಡಿದೆ. ಈ ಪ್ರದೇಶದಲ್ಲಿ 100 ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದೆ.
ಟೊಮೆಟೊ ಮಾರಾಟ ಮಾಡುವ ಮೂಲಕ ರೈತರು ಲಕ್ಷಾಧಿಪತಿಗಳಾಗುತ್ತಿರುವುದು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದ ಕೋಲಾರದ ರೈತರ ಕುಟುಂಬವೊಂದು ಈ ವಾರ 2,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿ 38 ಲಕ್ಷ ರೂ.ಗಳೊಂದಿಗೆ ಮನೆಗೆ ಮರಳಿದೆ.