ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದಿದ್ದಕ್ಕೆ ಕಚೇರಿಯೊಳಗೆ ಉಡ ಬಿಟ್ಟ ಅಸಾಮಿ
Monday, July 3, 2023
ಭೋಪಾಲ್: ಬುಡಕಟ್ಟು ಸಮುದಾಯದ ವ್ಯಕ್ತಿಯೋರ್ವನು ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಹಣ ಬಿಡುಗಡೆ ಮಾಡದಿರುವುದಕ್ಕೆ ಮುನ್ಸಿಪಾಲ್ ಆಫೀಸರ್ ಕಚೇರಿಯೊಳಗೆ ಉಡವೊಂದನ್ನು ಬಿಟ್ಟಿರುವ ಘಟನೆ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಚಂದೇರಿಯಲ್ಲಿ ನಡೆದಿದೆ.
ತೋತಾರಾಮ್ ಎಂಬಾತ ಸರ್ಕಾರದಿಂದ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಹಣ ಮಂಜೂರು ಮಾಡುವಂತೆ ಹಲವು ದಿನಗಳಿಂದ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದ. ಆದರೆ ಅಧಿಕಾರಿಗಳು ಈತನ ಮಾತಿಗೆ ಕಿಮ್ಮತ್ತಿನ ಬೆಲೆಯನ್ನೂ ನೀಡಿಲ್ಲ. ಅಧಿಕಾರಿಗಳ ವರ್ತನೆಯಿಂದ ಬೇಸತ್ತ ತೋತಾರಾಮ್ ಉಡವೊಂದನ್ನು ತಂದು ನೇರವಾಗಿ ಮುಖ್ಯ ಅಧಿಕಾರಿಯ ಕಚೇರಿಯೊಳಗೇ ಬಿಟ್ಟಿದ್ದಾನೆ. ಅಲ್ಲದೆ ವೃತ್ತಿಯಲ್ಲಿ ಉರಗ ತಜ್ಞನಾಗಿರುವ ಈತ ತನ್ನ ಮನವಿಯನ್ನು ಈಡೇರಿಸದಿದ್ದಲ್ಲಿ ವಿಷಕಾರಿ ಹಾವುಗಳನ್ನು ಬಿಡುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುನ್ಸಿಪಾಲ್ ಅಧಿಕಾರಿ ತೋತರಾಮ್ ಹೆಸರಿನಲ್ಲಿ ಇರುವ ಜಾಗದಲ್ಲಿ ಮನೆ ನಿರ್ಮಿಸಲು ಸರ್ಕಾರದಿಂದ 1 ಲಕ್ಷ ರೂ. ಹಣ ಮಂಜೂರು ಮಾಡಲಾಗಿತ್ತು. ಆದರೆ, ಮಂಜೂರಾದ ಹಣದಲ್ಲಿ ತೋತರಾಮ್ 90 ಸಾವಿರ ರೂ. ಹಣನ್ನು ಖರ್ಚು ಮಾಡಿದ್ದಾನೆ. ಇದೀಗ ಮತ್ತೆ ಹಣ ಮಂಜೂರು ಮಾಡಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾನೆ. ಅಧಿಕಾರಿಗಳು ಆತನ ಮಾತಿಗೆ ಸರಿಯಾದ ಉತ್ತರ ಕೊಡದಿದ್ದಾಗ ಸಿಟ್ಟಿಗೆದ್ದು ಈ ರೀತಿ ಮಾಡುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಮುನ್ಸಿಪಾಲ್ ಅಧಿಕಾರಿಯೂ ಅರೋಪಿಸಿದ್ದಾರೆ.