UDUPI; ಶೌಚಾಲಯದಲ್ಲಿ ಹಿಡನ್ ಕ್ಯಾಮರ ಇಟ್ಟು ವಿಡಿಯೋ ಚಿತ್ರೀಕರಣ ಘಟನೆ: ಎಸ್ ಪಿ ಹೇಳಿದ್ದು ಹೀಗೆ
Tuesday, July 25, 2023
ಉಡುಪಿ: ಕೆಲ ದಿನಗಳ ಹಿಂದೆ ಇಲ್ಲಿನ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಎಸ್ ಪಿ ಅಕ್ಷಯ್ ಹಾಕೆ ಅವರು ಸ್ಪಷ್ಟನೆ ನೀಡಿ ವದಂತಿ ಹಬ್ಬಿಸದಂತೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಪಟ್ಟಂತೆ ಯಾವುದೇ ವಿಡಿಯೋ ನಮಗೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಹಲವಾರು ವಿಡಿಯೋಗಳನ್ನು ಮಾಡಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಸುದ್ದಿಯಾಗುತ್ತಿದೆ. ಆದರೆ ಇಲ್ಲಿಯ ತನಕ ನಮಗೆ ಯಾವುದೇ ಮಾಹಿತಿಯು ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೆ ನಾವೂ ಕೂಡ ನಿಗಾ ಇಟ್ಟಿದ್ದು ನಮಗೂ ಯಾವುದೇ ವಿಡಿಯೋ ಲಭ್ಯವಾಗಿಲ್ಲ ಎಂದರು.
ಕೆಲವರು ಬೇರೆ ಕಡೆ ಆದ ವಿಡಿಯೋಗಳಿಗೆ ಧ್ವನಿ ಎಡಿಟ್ ಮಾಡಿ ಉಡುಪಿ ಘಟನೆ ಎಂದು ಬಿಂಬಿಸುವ ಪ್ರಸಂಗವು ನಡೆಯುತ್ತಿದ್ದು, ಅದಕ್ಕೆ ನಾವು ಸ್ಪಷ್ಟನೆ ನೀಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶ ತಿಳಿಯದೆ ವದಂತಿ ಹರಡುವುದರಿಂದ ಜನರಿಗೆ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದ್ದಾರೆ
ಘಟನೆ ಸಂಬಂಧಪಟ್ಟಂತೆ ಒಂದಷ್ಟು ಮಾಹಿತಿಗಳು ಹರಿದಾಡುತ್ತಿದೆ. ಆದರೆ ಪೊಲೀಸ್ ಇಲಾಖೆಗೆ ಘಟನೆಯ ವಿಡಿಯೋ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೂ ನಾವು ನಿಗಾ ಇಟ್ಟಿದ್ದೇವೆ. ಅಲ್ಲೂ ನಮ್ಮ ಕಣ್ಣಿಗೆ ಬಿದ್ದಿಲ್ಲ. ಯಾರಾದರೂ ಸಿಕ್ಕಿದರೆ ನಮಗೆ ಮಾಹಿತಿ ತಿಳಿಸಿ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಯಾವುದೇ ದೂರು ನೀಡಲಾಗಿಲ್ಲ. ನಾವು ಸುಮೋಟೋ ಕೇಸು ದಾಖಲಿಸಲು ಸಾಮಾಜಿಕ ಜಾಲತಾಣದಿಂದ ಯಾವುದೇ ಸಾಕ್ಷಿಗಳ ದಾಖಲೆಗಳು ನಮಗೆ ಸಿಕ್ಕಿಲ್ಲ. ಮೊಬೈಲ್ ಪರಿಶೀಲನೆ ಮಾಡಲಾಗಿದೆ, ಅದರಲ್ಲಿಯೂ ಏನೂ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ಟ್ವೀಟ್ ವಿಚಾರಕ್ಕೆ ಮಾತನಾಡಿದ ಎಸ್ ಪಿ, ಟ್ವೀಟ್ ಮಾಡಿದವರು ಘಟನೆಯ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅವರನ್ನು ಪೊಲೀಸರು ಸಂಪರ್ಕಿಸಿದ್ದು ಘಟನೆಯ ಮಾಹಿತಿ ನೀಡಲು ಹೊರತು ತೊಂದರೆ ಕೊಡಲು ಅಲ್ಲ ಎಂದರು.
ಜನರಿಗೆ ಮನವಿ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಬೇಡದ ವಿಚಾರಗಳನ್ನು ಈ ವಿಷಯಕ್ಕೆ ಲಿಂಕ್ ಮಾಡಿ ಜನರ ಮನಸ್ಸಿನಲ್ಲಿ ಆತಂಕ ಸೃಷ್ಟಿ ಮಾಡಬೇಡಿ ಅಥವಾ ಗೊಂದಲವುಂಟು ಮಾಡುವ ಪೋಸ್ಟ್ ಗಳನ್ನು ಹಾಕಬೇಡಿ. ಏನಾದರೂ ಖಚಿತ ಮಾಹಿತಿ ಸಿಕ್ಕಿದರೆ ಶೇರ್ ಮಾಡುವ ಮೊದಲು ನಮಗೆ ತಿಳಿಸಿ. ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ವದಂತಿ ಹರಡಬೇಡಿ ಎಂದರು