UDUPI- ಶೌಚಾಲಯದಲ್ಲಿ ಮೊಬೈಲ್ ವಿಡಿಯೋ ಪ್ರಕರಣ- ಮೂವರು ವಿದ್ಯಾರ್ಥಿನಿಯರು ಅಮಾನತು
Wednesday, July 26, 2023
ಉಡುಪಿ: ಕಾಲೇಜು ಹಾಗೂ ತರಗತಿಗಳಿಗೆ ಮೊಬೈಲ್ ತರಲು ಅನುಮತಿ ಇಲ್ಲದಿದ್ದರೂ ವಾಸ್ ರೂಂನಲ್ಲಿ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ರೆಕಾರ್ಡಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ ಎಂದು ನೇತ್ರಜ್ಯೋತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ನ ನಿರ್ದೇಶಕಿ ರಶ್ಮಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜು.19ರಂದು ಘಟನೆ ನಡೆದ ದಿನವೇ ಮುಖ್ಯ ಶೈಕ್ಷಣಿಕ ಸಂಯೋಜಕರು ಪ್ರಾಥಮಿಕ ಪರಿಶೀಲನೆ ನಡೆಸಿದ್ದು, ಮೂವರು ವಿದ್ಯಾರ್ಥಿ ನಿಯರು ತಪ್ಪೊಪ್ಪಿಕೊಂಡಿದ್ದಾರೆ.ಪೊಲೀಸರಿಗೆ ಮೊಬೈಲ್ ಸಹಿತ ಮಾಹಿತಿ ನೀಡಿದ್ದು ತಮಾಷೆಗಾಗಿ ಮಾಡಿದ ವಿಡಿಯೋ ರೆಕಾರ್ಡಿಂಗ್‌ನ ಹಿಂದೆ ಅನ್ಯ ಉದ್ದೇಶವಿರಲಿಲ್ಲ ಎಂಬುದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಆಗಿದೆಯೇ, ವಿಡಿಯೋ ಫಾರ್ವರ್ಡ್ ಮಾಡಲಾಗಿದೆಯೇ, ಡಿಲೀಟ್ ಮಾಡಲಾಗಿದೆಯೇ, ಸಾಧ್ಯವೇ ಎನ್ನುವುದನ್ನು ಪೊಲೀಸರ ತನಿಖೆ ಯಿಂದಷ್ಟೇ ಗೊತ್ತಾಗಲು ಸಾಧ್ಯ ಎಂದರು.
ಸಂತ್ರಸ್ಥ ವಿದ್ಯಾರ್ಥಿನಿ ಮೊಬೈಲ್ ನಲ್ಲಿದ್ದ ವಿಡಿಯೋ ನೋಡಿಲ್ಲ, ಮೂವರು ವಿದ್ಯಾರ್ಥಿನಿಯರು ಡಿಲೀಟ್ ಮಾಡಿರಲೂಬಹುದು, ನಾವು ಡಿಲೀಟ್ ಮಾಡಿಸಿಲ್ಲ. ಸಂತ್ರಸ್ಥ ವಿದ್ಯಾರ್ಥಿನಿ ನೀಡಿದ ಹೇಳಿಕೆಯಲ್ಲಿ, ತನ್ನ ಭವಿಷ್ಯ ಹಾಗೂ ಮೂವರು ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಪೊಲೀಸ್ ದೂರು ನೀಡಲು ನಿರಾಕರಣೆ ಮಾಡಿದ್ದಾಳೆ. ಕಾನೂನು ಸಲಹೆ ಪ್ರಕಾರ ಕಾಲೇಜು ವತಿಯಿಂದ ಪೊಲೀಸರಿಗೆ ದೂರು ನೀಡಿಲ್ಲ, ಮೂವರು ವಿದ್ಯಾರ್ಥಿನಿ ಯರಿಗೆ ಶಿಕ್ಷಕರ ಮೂಲಕ ಬುದ್ಧಿವಾದ ಹೇಳಬೇಕೆಂದು ಬಯಸಿದ್ದ ವಿದ್ಯಾರ್ಥಿನಿ ಯಲ್ಲಿ ಮೂವರು ವಿದ್ಯಾರ್ಥಿನಿಯರು ಕ್ಷಮೆ ಕೇಳಿದ್ದಾರೆ ಎಂದರು.
ಯಾವುದೇ ವಿಷಯದ ಪೂರ್ವಾಪರ ತಿಳಿದುಕೊಳ್ಳದೆ ಸುಳ್ಳು, ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ ಎಂದು ಅವರು ಮನವಿ ಮಾಡಿದರು.