Udupi-ಶೌಚಾಲಯದಲ್ಲಿ ಮೊಬೈಲ್ ಪತ್ತೆ ಪ್ರಕರಣ- ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದು ಹೀಗೆ..
Wednesday, July 26, 2023
ಉಡುಪಿ; ಖಾಸಗಿ ಕಾಲೇಜಿನ ವಾಶ್ ರೂಂನಲ್ಲಿ ಮೂವರು ವಿದ್ಯಾರ್ಥಿನಿಯರು ಸೇರಿ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು ಸಂತ್ರಸ್ತೆಗೆ ನ್ಯಾಯ ದೊರಕಿಸಿ ಕೊಡುವ ವರೆಗೆ ಸುಮ್ಮನಿರಲಾಗದು ಎಂದು ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಹೇಳಿದ್ದಾರೆ.
ಹೊರರಾಜ್ಯ ಪ್ರವಾಸದಲ್ಲಿರುವ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷೆ ರಶ್ಮಿ ಸಾಮಂತ್ ಅವರ ಮಣಿಪಾಲ ನಿವಾಸದಲ್ಲಿ ರಶ್ಮಿ ಅವರ ತಾಯಿಯನ್ನು ಭೇಟಿ ಮಾಡಿದ ಬಳಿಕ , ಯಾವುದೇ ಕಾರಣಕ್ಕೂ ಹೆದರದಿರಿ. ನಾವೆಲ್ಲ ನಿಮ್ಮ ಜತೆಗಿದ್ದೇವೆ ಎಂದು ಧೈರ್ಯ ತುಂಬಿದ್ದಾಗಿ ತಿಳಿಸಿದರು.
ರಾಜ್ಯ ಸರಕಾರ ತನಿಖೆ ನಡೆಸದೆ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದೆ. ಪ್ರಕರಣದ ಬಗ್ಗೆ ಧ್ವನಿಯೆತ್ತಿದ ರಶ್ಮಿ ಸಾಮಂತ್ ಮನೆಮಂದಿಗೆ ಪೊಲೀಸ್ ಕಿರುಕುಳ ವಿರುದ್ಧ ಸಂಬಂಧಿತರಿಂದ ವರದಿ ಕೇಳಲಾಗಿದೆ. ಯಾವುದೇ ಕಾರಣಕ್ಕೂ ರಶ್ಮಿ ಹಾಗೂ ಕುಟುಂಬಕ್ಕೆ ತೊಂದರೆ ಕೊಡಬಾರದು, ತೊಂದರೆ ಕೊಟ್ಟರೆ ಸುಮ್ಮನಿರೋದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು
ಸೂಕ್ತ ತನಿಖೆಗೆ ಸಿಎಂ, ಗೃಹ ಸಚಿವರಿಗೆ ಮನವಿ
ಹಿಜಾಬ್ ವಿವಾದದ ಬಳಿಕ ಮತ್ತೆ ಉಡುಪಿ ಜಿಲ್ಲೆಯ ಗೌರವಕ್ಕೆ ಚ್ಯುತಿ ತರುವ ಯತ್ನವನ್ನು ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಗೃಹ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಧಾನಸಭೆ ಅಧಿವೇಶನ, ಕಾಲೇಜಿಗೆ ಮಳೆ ರಜೆ ಹಿನ್ನೆಲೆಯಲ್ಲಿ ಪೊಲೀಸರಿಂದ ಮಾಹಿತಿ ಪಡೆದು ತನಿಖೆ, ತಪ್ಪಿತಸ್ಥ ವಿದ್ಯಾರ್ಥಿನಿ ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಮಹಿಳಾ ಗೌರವದ ಜತೆಗೆ ಜಿಲ್ಲೆಯ ಗೌರವಕ್ಕೆ ಕುಂದು ಸಲ್ಲದು ಎಂದರು.
ಮೂವರು ವಿದ್ಯಾರ್ಥಿನಿಯರ ಹಿಂದೆ ಯಾವುದಾದರೂ ಜಿಹಾದಿ ಸಂಘಟನೆಗಳ ಕೈವಾಡದ ಶಂಕೆ ನಿಟ್ಟಿನಲ್ಲಿ ತನಿಖೆಯ ಅಗತ್ಯವಿದೆ. ಒಂದೊಮ್ಮೆ ವಿದ್ಯಾರ್ಥಿನಿಯರು ತಾವು ಚಿತ್ರೀಕರಿ ಸಿದ ವಿಡಿಯೋ ಫಾರ್ವರ್ಡ್ ಮಾಡಿದ್ದರೆ ಅದು ಅಕ್ಷಮ್ಯ ಅಪರಾಧ, ದೇಶ, ಸಂಘಟನೆ ಪರ ಕೆಲಸ ಮಾಡಿದವರನ್ನು ಗಡಿಪಾರು ಮಾಡುವ ಸರಕಾರ ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಬೇಕು. ಮೊಬೈಲ್ ದಾಖಲೆ ಅಳಿಸಿದ್ದರೆ ಪ್ರಯೋಗಾಲಯದ ಮೂಲಕ ಮರಳಿ ಪಡೆಯಲು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ನೀಡಬೇಕು. ಬುಧವಾರದೊಳಗೆ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಮೂಲಕ ಸತ್ಯಾಸತ್ಯತೆ ಅರಿತುಕೊಳ್ಳುವೆ ಎಂದರು.