ಮಂಗಳೂರು: ನೀರಿನ ಸೆಳೆತಕ್ಕೆ ಸಿಲುಕಿದ ಬೋಟ್ - ನದಿ ಪಾಲಾಗಲಿದ್ದ ಯುವಕನ ರಕ್ಷಣೆಯ ರೋಚಕ ವೀಡಿಯೋ ವೈರಲ್
Wednesday, July 5, 2023
ಮಂಗಳೂರು: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಅಬ್ಬರ ಹೆಚ್ಚಾಗಿದ್ದು, ನಿರಂತರವಾಗಿ ಸುರಿಯುವ ವರ್ಷಧಾರೆಗೆ ಜನಜೀವನ ತತ್ತರಗೊಂಡಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಯಾರೂ ಮೀನುಗಾರಿಕೆಗೆ ಎಚ್ಚರಿಕೆ ನೀಡಿಲಾಗಿದೆ. ಆದರೆ ಅಪಾಯವನ್ನೂ ಲೆಕ್ಕಿಸದೆ ಮೀನುಗಾರಿಕೆಗೆ ತೆರಳಿದ ಬೋಟ್ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಯುವಕನನ್ನು ರಕ್ಷಣೆ ಮಾಡಿರುವ ರೋಚಕ ವೀಡಿಯೋ ವೈರಲ್ ಆಗಿದೆ.
ನಗರದ ಹೊರವಲಯದ ಹರೇಕಳ - ಅಡ್ಯಾರ್ ಸೇತುವೆಯ ಕೆಳಭಾಗ ನೇತ್ರಾವತಿ ನದಿಯಲ್ಲಿ ಮೀನುಗಾರಿಕೆ ನಡೆಸಲೆಂದು ಈತ ಬೋಟ್ ನಲ್ಲಿ ತೆರಳಿದ್ದ. ಆದರೆ ನಿರಂತರ ಸುರಿವ ಮಳೆಯ ಪರಿಣಾಮ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಆದ್ದರಿಂದ ನೀರಿನ ರಭಸಕ್ಕೆ ದೋಣಿ ಏಕಾಏಕಿ ಮಗುಚಿಬಿದ್ದು ಭಾರೀ ಅಪಾಯ ಎದುರಾಗಿದೆ. ಮೀನುಗಾರಿಕೆಗೆ ತೆರಳಿದ್ದ ಯುವಕ ಅಪಾಯಕ್ಕೆ ಸಿಲುಕಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಯುವಕರು ಸೇತುವೆಯ ಮೇಲಿನಿಂದ ನದಿಗೆ ಹಗ್ಗ ಇಳಿಸಿ ಮೇಲಕ್ಕೆತ್ತಿದ್ದಾರೆ. ಆದರೆ ದೋಣಿ ನೀರುಪಾಲಾಗಿದ್ದು, ಯುವಕನ ರಕ್ಷಣೆಯ ವೀಡಿಯೋ ವೈರಲ್ ಆಗಿದೆ.