-->
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆಯೋ, ಜಿಹಾದಿ ಸರಕಾರ ಇದೆಯೋ ಎಂಬ ಸಂಶಯವಿದೆ - ನಳಿನ್ ಕುಮಾರ್ ಕಟೀಲು

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆಯೋ, ಜಿಹಾದಿ ಸರಕಾರ ಇದೆಯೋ ಎಂಬ ಸಂಶಯವಿದೆ - ನಳಿನ್ ಕುಮಾರ್ ಕಟೀಲು


ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಜಿಹಾದಿಗಳು ತಲೆಯೆತ್ತುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆಯೋ ಅಥವಾ ಜಿಹಾದಿ ಸರಕಾರವಿದೆಯೋ ಎಂಬ ಸಂಶಯ ಎಲ್ಲರಿಗೂ ಕಾಡಲಾರಂಭಿಸಿದೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಹಿಂದೂ ವಿರೋಧಿ ನೀತಿ ತಾಂಡವವಾಡುತ್ತಿದೆ. ಪಿಎಫ್ಐ ಭಯೋತ್ಪಾದಕರನ್ನು ಸಿದ್ದರಾಮಯ್ಯ ಸರಕಾರ ಜೈಲಿನಿಂದ ಬಿಡುಗಡೆ ಮಾಡುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ಭಯೋತ್ಪಾದಕರ ಪರವಾಗಿರುವ, ರಾಷ್ಟ್ರವಿರೋಧಿ ಸಿಎಂ ಆಗಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಿಡಿಕಾರಿದರು.


ಉಡುಪಿಯ ಹಿಂದು ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಚಿತ್ರೀಕರಣದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯಕ್ಕೆ ಆಗ್ರಹಿಸಿ ನಗರದ ಪುರಭವನದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಅರಾಜಕತೆ ವಾತಾವರಣ ಕಂಡು ಬರುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ವಿಫಲತೆ ಎದ್ದು ಕಾಣುತ್ತಿದೆ. ಈ ವಿಚಾರದಲ್ಲಿ ಸಿಎಂ ಮಾತ್ರವಲ್ಲ ರಾಜ್ಯದ ಗೃಹಸಚಿವರೂ ವಿಫಲವಾಗಿದ್ದಾರೆ.  ಕೇರಳ ಫೈಲ್ಸ್ ಸಿನಿಮಾದ ಘಟನೆಯೇ ಉಡುಪಿಯ ಕಾಲೇಜಿನಲ್ಲಿ ನಡೆದಿದೆ. ಆದರೆ ಗೃಹಸಚಿವರು ಇದನ್ನು ಮಕ್ಕಳಾಟ ಎನ್ನುತ್ತಿದ್ದಾರೆ. ಆದರೆ ಈ ರೀತಿಯಲ್ಲಿ ವೀಡಿಯೋ ಆಗುತ್ತಿರುವುದು ಒಂದು ದಿನದ ಘಟನೆಯಲ್ಲ. ಆರೇಳು ಬಾರಿ ಈ ರೀತಿಯಲ್ಲಿ ವೀಡಿಯೋ ಆಗಿದೆ. ಕೇರಳದ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಹಿಂದೂ ಹೆಣ್ಣುಮಕ್ಕಳ ವೀಡಿಯೋ ಚಿತ್ರೀಕರಿಸಿ ಮತಾಂಧರಿಗೆ ಕಳುಹಿಸಿದ್ದಾರೆ. ಆದರೆ ಈ ಘಟನೆಯನ್ನು ಮುಚ್ಚಿಹಾಕುವ ಯತ್ನ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಿದ್ದರಾಮಯ್ಯ ಸರಕಾರಕ್ಕೆ ವೀಡಿಯೋ ಮಾಡಿದವರನ್ನು, ಕೊಲೆಗಡುಕರನ್ನು ಜೈಲಿಗೆ ಕಳುಹಿಸುವ ತಾಕತ್ತಿಲ್ಲ‌. ಆದರೆ ಟ್ವೀಟ್ ಮಾಡಿದ ರಾಷ್ಟ್ರಭಕ್ತೆಯನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದೆ. ಇದೀಗ ಇಡೀ ರಾಜ್ಯದಲ್ಲಿ ಜನರು ಭೀತಿಗೊಳಗಾಗುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬೆಳಗಾವಿ, ಉತ್ತರಕನ್ನಡದಲ್ಲಿ ಆದ ವಿಜಯೋತ್ಸವದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ರಾಷ್ಟ್ರವಿರೋಧಿಗಳನ್ನು ಇಂದಿನವರೆಗೆ ಬಂಧಿಸುವ ತಾಕತ್ತು ಕಾಂಗ್ರೆಸ್ ಸರಕಾರಕ್ಕೆ ಆಗಿಲ್ಲ. ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ಆ ರಾಷ್ಟ್ರವಿರೋಧಿಗಳನ್ನು ಜೈಲಿಗಟ್ಟಲಿ. ಇಲ್ಲದಿದ್ದಲ್ಲಿ ಅವರನ್ನು ನಿಮ್ಮ ಕಾಂಗ್ರೆಸ್ ಕಾರ್ಯಕರ್ತರೆಂದು ಒಪ್ಪಿಕೊಳ್ಳಿ ಎಂದು ನಳಿನ್ ಕುಮಾರ್ ಕಟೀಲು ಆಗ್ರಹಿಸಿದರು.


Ads on article

Advertise in articles 1

advertising articles 2

Advertise under the article