ಮಳೆಗೆ ರಜೆ ನೀಡಿದ ದ.ಕ ಡಿಸಿ- ಮಕ್ಕಳಾಟದ ವಿಡಿಯೋ VIRAL
Saturday, July 29, 2023
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಸಾರಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸಿ ಮೂರು ಮಕ್ಕಳ ಗುಂಪೊಂದು ಧನ್ಯವಾದ ತಿಳಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿಯೋರ್ವ ಜಿಲ್ಲಾಧಿಕಾರಿಗಳ ಹಲವು ಫೋಟೋಗಳನ್ನು ಅಂಟಿಸಿ ಕೂತಿರುತ್ತಾನೆ. ಆತನ ಬಳಿ ಇನ್ನೋರ್ವ ವಿದ್ಯಾರ್ಥಿ ಬಂದು, ಇದು ಯಾರ ಫೋಟೋ ಇಷ್ಟೊಂದು ಅಂಟಿಸಿದ್ದೀಯಾ ಎಂದು ಬ್ಯಾರಿ ಭಾಷೆಯಲ್ಲಿ ಪ್ರಶ್ನಿಸುತ್ತಾನೆ. ಆಗ ಆ ವಿದ್ಯಾರ್ಥಿ, ಇದು ನಮ್ಮ ಜಿಲ್ಲಾಧಿಕಾರಿ, ಮಳೆ ಬಂದಾಗ ನಮಗೆ ಶಾಲೆಗೆ ರಜೆ ನೀಡುತ್ತಾರೆ. ಎಂದು ಜಿಲ್ಲಾಧಿಕಾರಿಗಳ ಪೋಟೋ ತೋರಿಸಿ ವಿವರಿಸುತ್ತಾನೆ.
ಈ ಸಂದರ್ಭ ಮತ್ತೊಬ್ಬ ವಿದ್ಯಾರ್ಥಿ ಆಗಮಿಸಿ ಜಿಲ್ಲಾಧಿಕಾರಿಗೆ ಜೈ ಎಂದು ಕೂಗುತ್ತಿರುವುದು ವಿಡಿಯೋ ತುಣುಕಿನಲ್ಲಿದೆ. ಅಲ್ಲದೆ ಜಿಲ್ಲಾಧಿಕಾರಿ ಫೋಟೋ ತಬ್ಬಿಕೊಂಡು ಗೌರವ ಕೊಡುವುದು, ಆರತಿ ಬೆಳಗುವುದನ್ನೂ ವಿಡಿಯೋದಲ್ಲಿ ಕಾಣಬಹುದು. ಮೂರು ಮಕ್ಕಳ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.