ನಾಲ್ಕು ಹೆಸರಿನಲ್ಲಿ ಕರೆ ಮಾಡುತ್ತಿದ್ದ ಬೆಳದಿಂಗಳ ಬಾಲೆ: 10 ವರ್ಷಗಳಲ್ಲಿ ಈಕೆ ದೋಚಿದ್ದು ಬರೋಬ್ಬರಿ ನಾಲ್ಕು ಕೋಟಿ
Tuesday, August 8, 2023
ಸೂರತ್: ಪ್ರಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿಯವರ ಬೆಳದಿಂಗಳ ಬಾಲೆ ಸಿನಿಮಾದಲ್ಲಿ ನಾಯಕನಿಗೆ ನಾಯಕಿ ಬೆಳದಿಂಗಳ ಬಾಲೆ ಬೇರೆಬೇರೆ ಹೆಸರುಗಳಲ್ಲಿ ಕರೆ ಮಾಡುತ್ತಿದ್ದಳು. ಹೀಗೆ ಸುಮಾರು ಹತ್ತು ವರ್ಷ ಮಾತನಾಡುವ ಇಬ್ಬರೂ ಒಮ್ಮೆಯೂ ಭೇಟಿಯಾಗೋಲ್ಲ.
ಇದೇ ರೀತಿ ಪೋನ್ ಪ್ರಣಯಕ್ಕೆ ವ್ಯಕ್ತಿಯೊಬ್ಬನು ಬೆಳದಿಂಗಳ ಬಾಲೆಗಾಗಿ 4 ಕೋಟಿ ರೂ. ಕಳೆದುಕೊಂಡಿದ್ದಾನೆ. ಅಂದ ಹಾಗೆ ಈ ಬೆಳದಿಂಗಳ ಬಾಲೆ ಪರಿಚಯ ಆಗುವ ಸಂದರ್ಭ ಕೋಟ್ಯಧಿಪತಿಯಾಗಿದ್ದ ಈ ವ್ಯಕ್ತಿ ಈಗ ಬರಿಗೈ ದಾಸನಾಗಿದ್ದಾನೆ. 2012ರಲ್ಲಿ ತನ್ನ ಒಡೆತನದಲ್ಲಿದ್ದ ಜಮೀನನ್ನು ಮಾರಾಟ ಮಾಡಿ ದೊಡ್ಡ ಮೊತ್ತವನ್ನೇ ಗಳಿಸಿದ್ದ ಮುಕೇಶ್ ದೇಸಾಯಿ ತುಂಬಾ ವೈಭವೋಪೇತ ಬದುಕು ರೂಢಿಸಿಕೊಂಡಿದ್ದ.
ಇದೇ ಸಂದರ್ಭ 2013ರಲ್ಲಿ ಅವರಿಗೆ ಒಂದು ಮಿಸ್ ಕಾಲ್ ಬರುತ್ತದೆ. ಈ ಕರೆಯನ್ನು ಅವರು ಅಟೆಂಡ್ ಮಾಡುತ್ತಾರೆ. ಸಿನಿಮಾದಂತೆಯೇ ಮುಕೇಶ್ ಬದುಕಿನಲ್ಲಿ ಬೆಳದಿಂಗಳ ಬಾಲೆಯ ಪ್ರವೇಶವಾಗುತ್ತದೆ. ಒಬ್ಬಳೇ ನಾಲ್ವರು ಬೇರೆ ಬೇರೆ ಹೆಸರಿನಲ್ಲಿ ಪರಿಚಯ ಮಾಡಿಕೊಳ್ಳುತ್ತಾಳೆ. ನಾಲ್ವರು ಬೆಳದಿಂಗಳ ಬಾಲೆಯರ ಮಾತುಗಳಿಗೆ ಮುಕೇಶ್ ಮರುಳಾಗುತ್ತಾರೆ. ನಾಲ್ವರೂ ಮುಕೇಶ್ ನಿಂದ ಸತತವಾಗಿ ಹಣ ದೋಚುತ್ತಾರೆ.
ಆರ್ಥಿಕವಾಗಿ ಸಂಕಷ್ಟ ಸ್ಥಿತಿ ಎದುರಾದಾಗ ಮುಕೇಶ್ ತಾನು ಈವರೆಗೆ ಕೊಟ್ಟ ಹಣ ವಾಪಸ್ ಕೊಡು ಎಂದು ಬೆಳದಿಂಗಳ ಬಾಲೆಗೆ ಕೇಳಿದ್ದಾರೆ. ದುಡ್ಡು ವಾಪಸ್ ಕೇಳಿದ್ದಕ್ಕೆ ಸುಲಿಗೆ ಹಾಗೂ ಅತ್ಯಾಚಾರದ ಕೇಸ್ ಬೆದರಿಕೆ ಹಾಕಿದ್ದಾಳೆ. ಕೋಟ್ಯಂತರ ರೂ. ಕಳೆದುಕೊಂಡಿದ್ದಲ್ಲದೆ ಯುವತಿಯ ಕಾಟವನ್ನು ತಾಳಲಾರದ ದೇಸಾಯಿ ಕೊನೆಗೂ ಆಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಿಮಗೂ ಇಂಥ ಮಿಸ್ ಕಾಲ್ ಬರಬಹುದು ಎಚ್ಚರವಾಗಿರಿ.