ಮಂಗಳೂರು: ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಕೆಲಸದ ಆಫರ್ - 10.88 ಲಕ್ಷ ಪಂಗನಾಮ
Thursday, August 31, 2023
ಮಂಗಳೂರು: ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಕೆಲಸದ ಆಫರ್ ಮಾಡಿ ವ್ಯಕ್ತಿಯೊಬ್ಬರಿಗೆ ಖತರ್ನಾಕ್ ಖದೀಮನೋರ್ವನು ಬರೋಬ್ಬರಿ 10.88 ಲಕ್ಷ ರೂ. ಪಂಗನಾಮ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಯುಯೇಟ್ ಮೀಡಿಯಾ ಕಂಪೆನಿಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬನು ದೂರುದಾರರಿಗೆ ಆ. 26ರಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದನು. ಬಳಿಕ ಆನ್‌ಲೈನ್‌ನಲ್ಲಿ ಟಾಸ್ಕ್ ಗಳ ಮೂಲಕ ದಿನನಿತ್ಯವೂ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶ ರವಾನಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಆತ ಹೇಳಿದಂತೆ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ಆರಂಭದಲ್ಲಿ 1,000 ರೂ.ಗಳಿಂದ 3,000 ರೂ. ನಗದು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಮೊತ್ತದ ಹಣ ಜಮೆಯಾಗಿತ್ತು. ಆ ಬಳಿಕ ಆನ್ಲೈನ್ ನಲ್ಲಿ ಹಣ ಹೂಡಿಕೆಗೆ ಮತ್ತೆ ಒತ್ತಾಯಿಸಿದ್ದಾನೆ. ಅದರಂತೆ ದೂರುದಾರರಿಂದ ಹಂತಹಂತವಾಗಿ ಆ.28ರವರೆಗೆ ಒಟ್ಟು 10.88 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ ಆ ಬಳಿಕ ಯಾವುದೇ ಮೊತ್ತವನ್ನು ಮರುಪಾವತಿಸದೆ ವಂಚಿಸಿದ್ದಾನೆಂದು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.