-->
11 ಮಂದಿ ಪೌರಕಾರ್ಮಿಕೆಯರ ಬದುಕು ಬದಲಿಸಿದ ಕೇರಳ ಮಾನ್ಸೂನ್ 10ಕೋಟಿ ಬಂಪರ್ ಬಹುಮಾನ

11 ಮಂದಿ ಪೌರಕಾರ್ಮಿಕೆಯರ ಬದುಕು ಬದಲಿಸಿದ ಕೇರಳ ಮಾನ್ಸೂನ್ 10ಕೋಟಿ ಬಂಪರ್ ಬಹುಮಾನ

ಮಲಪ್ಪುರಂ: ಅದೃಷ್ಟವೆಂಬುದು ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆಂದು ಅಂದಾಜಿಸುವುದೇ ಕಷ್ಟ. ಜನಸಾಮಾನ್ಯರು ಕೆಲವರು ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಳ್ಳುತ್ತಿರುತ್ತೇವೆ. ಇಂತಹ ಅದೃಷ್ಟವೊಂದು ಇದೀಗ ಕೇರಳದ ಪೌರ ಕಾರ್ಮಿಕರ ಬದುಕಿನಲ್ಲಿ ನಡೆದಿದೆ.

ಕಷ್ಟದಲ್ಲಿದ್ದವರನ್ನು ದೇವರು ಕೈಹಿಡಿಯುತ್ತಾನೆ ಎಂಬುದಕ್ಕೆ ಈ ಘಟನೆಯೇ ತಕ್ಕ ಉದಾಹರಣೆ. ಲಕ್ಷ್ಮೀ ಎಂಬ ಪೌರಕಾರ್ಮಿಕೆ ನಿನ್ನೆ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ, ಬರುವಾಗ ಊಟ ತಂದಿರಲಿಲ್ಲ. ಅದಕ್ಕೆ ಕಾರಣ ಮನೆಯಲ್ಲಿ ಅಕ್ಕಿ ಇರಲಿಲ್ಲ. ಇನ್ನೂ ಬೇಬಿ ಎಂಬಾಕೆ ಬಳಿ ಆಟೋ ಚಾಲಕನಿಗೆ ಕೊಡಲು 10 ರೂ. ಕೂಡ ಇರಲಿಲ್ಲ. ಅದೇ ರೀತಿ ಚಂದ್ರಿಕಾ ಬಳಿ ಚಿಕಿತ್ಸೆಗೆ ಹಣವಿಲ್ಲದೆ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದಾರೆ.‌ ಇದಿಷ್ಟು ಕೇರಳದ ಪರಪ್ಪನಂಗಡಿ ಮುನ್ಸಿಪಾಲಿಟಿಯಲ್ಲಿ ಹರಿತ ಕರ್ಮ ಸೇನಾ ಸದಸ್ಯರ ಪರಿಸ್ಥಿತಿಯಾಗಿದೆ. 

ಆದರೆ, ಇದೀಗ ಅವರ ಅದೃಷ್ಟ ಬಾಗಿಲು ತೆಗೆದಿದೆ. ಅವರ ಕಷ್ಟಗಳೆಲ್ಲ ದೂರವಾಗುವ ದಿನ ಬಂದಿದೆ. ಅವರು ತೆಗೆದ ಕೇರಳದ ಮಾನ್ಸೂನ್​ ಲಾಟರಿಗೆ ಬಂಪರ್​ 10 ಕೋಟಿ ರೂ. ಬಹುಮಾನ ಬಂದಿದೆ. ಗುರುವಾರ ಪ್ರಕಟವಾದ ಲಾಟರಿ ಫಲಿತಾಂಶದಿಂದಾಗಿ ಇವರೆಲ್ಲರ ಬದುಕೇ ಬದಲಾಗಿದೆ. ನಿತ್ಯವೂ ನಗರವನ್ನು ಸ್ವಚ್ಛ ಮಾಡುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಬಡತನದ ಜೀವನ ಸಾಗಿಸುತ್ತಿರುವ ಮಹಿಳೆಯರ ಮನೆಯಲ್ಲಿ ಇದೀಗ ಲಕ್ಷ್ಮೀಯ ಆಗಮನವಾಗಿದೆ.

ಪಿ. ಲಕ್ಷ್ಮೀ, ಕೆ. ಲೀಲಾ, ಎಂ. ಪಿ. ರಾಧಾ, ಎಂ ಶೀಜಾ, ಚಂದ್ರಿಕಾ ಥುದಿಸ್ಸೆರಿ, ಬಿಂದು ಕೊಹುಮ್ಮಾಲ್​, ಕಾರ್ತ್ಯಾಯನಿ ಪಟ್ಟಣನಾಥ್, ಶೋಭಾ ಕುರುಲಿಲ್​, ಕುಟ್ಟುಮಲು ಚೆರುಕುಟ್ಟಿಯಿಲ್​, ಬೇಬಿ ಚೆರುಮನ್ನಿಲ್​ ಮತ್ತು ರಾಧಾ ಮುಂದುಪಲಥಿಲ್​  ಎಂಬ 11 ಮಂದಿ ಪೌರ ಕಾರ್ಮಿಕೆಯರು ಸೇರಿ MB 200261 ನಂಬರಿನ ಲಾಟರಿಯನ್ನು ಪಲಕ್ಕಾಡ್​ ನ್ಯೂ ಸ್ಟಾರ್​ ಏಜೆನ್ಸಿ ಬಳಿ ಖರೀದಿಸಿದ್ದರು. ಇವರು 250 ರೂ. ಬೆಲೆಯ ಲಾಟರಿ ಟಿಕೆಟ್​ ಅನ್ನು ಒಟ್ಟಿಗೆ ಖರೀದಿ ಮಾಡಿದ್ದರು. ರಾಧಾ ಎಲ್ಲರನ್ನು ಒತ್ತಾಯಿಸಿ ಮಾಡಿ ಟಿಕೆಟ್​ ಖರೀದಿಸಿದ್ದರು. ಇದೀಗ ಈ ಟಿಕೆಟ್​ಗೆ 10 ಕೋಟಿ ರೂ. ಬಂಪರ್​ ಲಾಟರಿ ಬಹುಮಾನ ಬಂದಿದ್ದು, ಟಿಕೆಟ್​ ಅನ್ನು ಪರಪ್ಪನಂಗಡಿಯ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಸಲ್ಲಿಸಿದ್ದಾರೆ. ಎಲ್ಲರೂ ಸೇರಿ ಒಟ್ಟು ನಾಲ್ಕು ಬಾರಿ ಟಿಕೆಟ್​ ಖರೀದಿ ಮಾಡಿದ್ದರು. ಕಳೆದ ಬಾರಿ 1000 ರೂಪಾಯಿ ಓಣಂ ಬಂಪರ್​ ಲಾಟರಿ ಬಹುಮಾನ ಗೆದ್ದಿದ್ದರು.

ಹಣವಿಲ್ಲದ ಕಾರಣ ಲಾಟರಿ ತೆಗೆದುಕೊಳ್ಳಬೇಕೇ ಎಂದು ಒಂದು ಕ್ಷಣ ಎಲ್ಲರೂ ಯೋಚನೆ ಮಾಡಿದ್ದರು. ಆದರೂ ಚಿಕಿತ್ಸೆ, ಸಾಲ ಸೇರಿದಂತೆ ಮನೆಯಲ್ಲಿನ ಹಲವು ಸಮಸ್ಯೆಗಳ ಕಾರಣದಿಂದ ಎಲ್ಲರೂ ಅದೃಷ್ಟದ ಮೇಲೆ ಭಾರ ಹಾಕಿ, ಲಾಟರಿ ಖರೀದಿ ಮಾಡುವ ತಮ್ಮ ನಿಲುವನ್ನು ಬದಲಿಸಲಿಲ್ಲ. ಎಂದಿನಂತೆಯೇ ಈ ಬಾರಿಯೂ ಲಾಟರಿ ಖರೀದಿ ಮಾಡಿದ್ದರು. ಇದೀಗ 11 ಮಂದಿಯನ್ನು ಅದೃಷ್ಟ ಕೈಹಿಡಿದಿದ್ದು, ಒಂದೇ ಬಾರಿ ತಮ್ಮ ಕಷ್ಟಗಳೆಲ್ಲ ಮಾಯವಾಗಿ, ಸಂತಸದ ಕ್ಷಣಗಳು ಎದುರಾಗಿವೆ. ಇದೀಗ 11 ಮಂದಿಯೂ ಲಕ್ಷಾಧಿಪತಿಗಳಾಗಿದ್ದರೂ ತಮ್ಮ ಪೌರ ಕಾರ್ಮಿಕ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article