ಬಾಯ್ ಫ್ರೆಂಡ್ ಮರಳಿ ಪತ್ನಿ - ಪುತ್ರನೊಂದಿಗೆ ನೆಲೆಸಿದ್ದೇ ತಪ್ಪಾಯ್ತು: ಸಿಟ್ಟಿಗೆ ಬಲಿಯಾದದ್ದು 11ರ ಬಾಲಕ
Wednesday, August 16, 2023
ದೆಹಲಿ: ಪಶ್ಚಿಮ ದೆಹಲಿಯಲ್ಲಿ ಹನ್ನೊಂದರ ಬಾಲಕನ ಹತ್ಯೆ ಪ್ರಕರಣದಲ್ಲಿ ಪೂಜಾ ಕುಮಾರಿ ಎಂಬ ಯುವತಿಯನ್ನು ಬಂಧಿಸಲಾಗಿದೆ.
ದಿವ್ಯಾಂಶ್ ಎಂಬ ಬಾಲಕನು ತನ್ನ ತಂದೆ ಪೂಜಾ ಕುಮಾರಿ ಎಂಬ 24ರ ಯುವತಿಯನ್ನು ಮದುವೆಯಾಗುವುದನ್ನು ತಡೆದಿದ್ದನು. ಇದರ ಕೋಪದಿಂದ ಬಾಲಕನನ್ನು ಕೊಂದಿದ್ದೇನೆಂದು ಕೊಲೆಗಾತಿಯೇ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜಾ ಕುಮಾರಿ, ಬಾಲಕ ದಿವ್ಯಾಂಶ್ ತಂದೆ ಜಿತೇಂದ್ರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರೂ 2019ರಲ್ಲಿ ಜೊತೆಯಾಗಿ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಮೂರು ವರ್ಷಗಳ ಬಳಿಕ, ಜಿತೇಂದ್ರ ತನ್ನ ಪತ್ನಿ ಹಾಗೂ ಪುತ್ರನ ಬಳಿಗೆ ವಾಪಸ್ ಹೋಗಿದ್ದಾನದ. ಇದು ಪೂಜಾಳಿಗೆ ಸಿಟ್ಟು ತರಿಸಿದೆ.
ಆಗಸ್ಟ್ 10 ರಂದು, ಇಂದರ್ ಪುರಿಯಲ್ಲಿರುವ ಜಿತೇಂದ್ರನ ಮನೆಯ ವಿಳಾಸವನ್ನು ಇಬ್ನರ ಕಾಮನ್ ಫ್ರೆಂಡ್ ನಿಂದ ಪೂಜಾ ಕುಮಾರಿ ಪಡೆದಿದ್ದಳು. ಆಕೆ ಜಿತೇಂದ್ರನ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭ ಬಾಲಕ ದಿವ್ಯಾಂಶ್ ಮಲಗಿದ್ದನು. ಮಲಗಿದ್ದ ಬಾಲಕನ ಕತ್ತನ್ನು ಹಿಸುಕಿದ ಪೂಜಾ ಕುಮಾರಿ ಆತನ ದೇಹವನ್ನು ಹಾಸಿಗೆಯಲ್ಲಿ ಸುತ್ತಿ ಪೆಟ್ಟಿಗೆಯಲ್ಲಿ ಅಡಗಿಸಿಟ್ಟಿದ್ದಾಳೆ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ಈ ಬಗ್ಗೆ ದೂರು ದಾಖಲಾದ ಬಳಿಕ ಸಿಸಿಟಿವಿ ಕ್ಯಾಮೆರಾದ ಸಹಾಯದಿಂದ ಪಶ್ಚಿಮ ದೆಹಲಿ ಪೊಲೀಸರು ಕೊಲೆಗಾತಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆಕೆಯನ್ನು ಹುಡುಕಾಡಿದ್ದಾರೆ. ಅದಕ್ಕಾಗಿ ಪೊಲೀಸರು ಇಂದರ್ ಪುರಿ ಮತ್ತು ಅದರ ನೆರೆಯ ಪ್ರದೇಶಗಳಾದ್ಯಂತ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅವಳು ಇನ್ನೂ ಅದೇ ಪ್ರದೇಶದಲ್ಲಿದ್ದಾಳೆ ಎಂದು ಪೊಲೀಸರು ಅರಿತುಕೊಂಡರು. ಆದರೆ ಆಕೆ ಆಗಾಗ್ಗೆ ತನ್ನ ಅಡಗುತಾಣಗಳನ್ನು ಬದಲಾಯಿಸುತ್ತಿದ್ದಳು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಮೂರು ದಿನಗಳ ನಂತರ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.