14 ಮತ್ತು 16 ವರ್ಷದ ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್
Tuesday, August 8, 2023
ಭೋಪಾಲ: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್ ಎಸಗಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹನುಮಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 25 ದಿನಗಳ ಹಿಂದೆ ಈ ಘಟನೆ ನಡೆದಿದ್ದು ಘಟನೆಯ ವೀಡಿಯೊ ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಆನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಸೋಂಕ ತಿಳಿಸಿದ್ದಾರೆ.
14 ಹಾಗೂ 16 ವರ್ಷ ಪ್ರಾಯದ ಇಬ್ಬರು ಸೋದರ ಸಂಬಂಧಿ ಬಾಲಕಿಯರು ಆಡುಗಳನ್ನು ಮೇಯಿಸಲು ಅರಣ್ಯಕ್ಕೆ ತೆರಳಿದ ಸಂದರ್ಭ ಕೆಲವು ವ್ಯಕ್ತಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಘಟನೆಯ ವೀಡಿಯೊ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತ ಬಾಲಕಿಯರು ಹಾಗೂ ಅವರ ಕುಟುಂಬಗಳು ಸೋಮವಾರ ದೂರು ದಾಖಲಿಸಿದ್ದಾರೆ.
ಆನಂತರ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಐವರನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.