ಯುವತಿಯ ಅಪಹರಿಸಿ 14ವರ್ಷಗಳ ಕಾಲ ಸಾವಿರಕ್ಕೂ ಅಧಿಕ ಬಾರಿ ಅತ್ಯಾಚಾರ: ಆರೋಪಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನಂತೆ
Thursday, August 3, 2023
ಮಾಸ್ಕೋ: ಯುವತಿಯೊಬ್ಬಳನ್ನು ಅಪಹರಿಸಿ 14 ವರ್ಷಗಳ ಕಾಲ ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ 51ವರ್ಷದ ವ್ಯಕ್ತಿಯನ್ನು ರಷ್ಯಾದ ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ.
ವ್ಲಾಡಿಮಿರ್ ಚೆಸ್ಕಿಡೋವ್ ಬಂಧಿತ ಆರೋಪಿ. ಸಂತ್ರಸ್ತ ಮಹಿಳೆಗೆ ಈಗ 33 ವರ್ಷ. 2009ರಲ್ಲಿ ಆಕೆಯ 19ವರ್ಷದ ಪ್ರಾಯದಲ್ಲಿ ಕಿಡ್ನ್ಯಾಪ್ ಮಾಡಲಾಗಿತ್ತು. ಆಕೆಯ ಮೇಲೆ ಈತ ಸಾವಿರಕ್ಕೂ ಅಧಿಕ ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯ ಮನೆಯಿಂದ ಸಂತ್ರಸ್ತೆ ತಪ್ಪಿಸಿಕೊಂಡ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಗೆ ತಪ್ಪಿಸಿಕೊಂಡು ಹೋಗಲು ಆರೋಪಿಯ ತಾಯಿಯೇ ಸಹಾಯ ಮಾಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಆರೋಪಿ ವ್ಲಾಡಿಮಿರ್ ಚೆಸ್ಕಿಡೋವ್ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿ ಎಂದು ತಿಳಿದುಬಂದಿದೆ. ಸಂತ್ರಸ್ತೆ 19 ವರ್ಷದವಳಿದ್ದಾಗ ಆಕೆಯನ್ನು ಆರೋಪಿ ಅಪಹರಿಸಿದ್ದಾನೆ. ಯುವತಿಯನ್ನು ತನ್ನ ಮನೆಗೆ ಮದ್ಯ ಸೇವಿಸಲು ಆರೋಪಿ ಆಹ್ವಾನಿಸಿದ್ದ. ಅವಳು ಮನೆಗೆ ಬಂದ ಬಳಿಕ, ಆಕೆಯನ್ನು ಸೆರೆಯಲ್ಲಿಟ್ಟು 14 ವರ್ಷಗಳ ಕಾಲ ನಿರಂತವಾಗಿ ಹಿಂಸಿಸಿದ್ದಾನೆ.
ಚಾಕುವಿನಿಂದ ಇರಿದು ಸಾಯಿಸುವುದಾಗಿ ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ. ಯುವತಿಗೆ ಪದೇಪದೆ ಚಿತ್ರಹಿಂಸೆ ನೀಡುತ್ತಿದ್ದ. ಆತ ಸಣ್ಣ ಪುಟ್ಟ ವಿಚಾರಗಳಿಗೂ ಆಕೆಯನ್ನು ಬರ್ಬರವಾಗಿ ಥಳಿಸುತ್ತಿದ್ದ. ಆಕೆಯನ್ನು ಬೆದರಿಸಿ ಮನೆಗೆಲಸವನ್ನೂ ಮಾಡಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆರೋಪಿ ಮತ್ತೊಂದು ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದು, ಆಕೆಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಂದು ಸಂತ್ರಸ್ತೆಯ ಹೇಳಿದ್ದಾಳೆ. 2011ರಲ್ಲಿ ನಡೆದ ಜಗಳಲ್ಲಿ ಆಕೆಯನ್ನು ಆರೋಪಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾಳೆ. ಆಕೆಯ ಹೇಳಿಕೆ ಬಳಿಕ ಪೊಲೀಸರು ಸ್ಮೊಲಿನೋ ಗ್ರಾಮದಲ್ಲಿರುವ ಆರೋಪಿ ಚೆಸ್ಕಿಡೋವ್ ಮನೆಯನ್ನು ಪರಿಶೀಲಿಸಿದ್ದಾರೆ.
ಪರಿಶೀಲನೆ ವೇಳೆ ಆರೋಪಿ ಮನೆಯಲ್ಲಿ ಸೆಕ್ಸ್ ಆಟಿಕೆಗಳು ಮತ್ತು ಅಶ್ಲೀಲ ಸಿಡಿಗಳು ಪತ್ತೆಯಾಗಿವೆ. ಅವರ ಮನೆಯ ಬೇಸ್ಮೆಂಟ್ನಲ್ಲಿ ಮೃತದೇಹದ ಅವಶೇಷಗಳು ಸಹ ಪತ್ತೆಯಾಗಿವೆ. ಆರೋಪಿಯು ಪ್ರಸ್ತುತ ಪೊಲೀಸ್ ಕಣ್ಗಾವಲಿನಲ್ಲಿ ಮಾನಸಿಕ ಆರೋಗ್ಯ ಕೇಂದ್ರದಲ್ಲಿದ್ದಾನೆ. ತನಿಖೆ ಮುಂದುವರಿದಿದೆ.