ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಮೊಳಹಳ್ಳಿ ಶಿವರಾಯರ 143ನೇ ಜನ್ಮ ದಿನಾಚರಣೆ
Friday, August 4, 2023
ಮಂಗಳೂರು: ಸಹಕಾರಿ ರತ್ನ ಮೊಳಹಳ್ಳಿ ಶಿವರಾಯರ 143ನೇ ಜನ್ಮ ದಿನಾಚರಣೆಯನ್ನು ಶುಕ್ರವಾರ ಬೆಳಗ್ಗೆ ಎಸ್ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಗಣನಾಥ ಎಕ್ಕಾರ್ ಅವರು, "ಸಹಕಾರಿ ತತ್ವ ವಿಶ್ವದಲ್ಲಿ ಬೆಳೆದು ಬಂದಾಗ ಜಿಲ್ಲೆಯಲ್ಲಿ ಸಹಕಾರಿ ರಂಗವನ್ನು ಭದ್ರವಾಗಿ ನೆಲೆಯೂರುವಂತೆ ಮಾಡಿದ್ದು ಮೊಳಹಳ್ಳಿ ಶಿವರಾಯರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ತತ್ವ ಬಹಳ ತೀಕ್ಷ್ಣ ಪ್ರಭಾವವನ್ನು ಬೀರಿದೆ. ಕುಂದಾಪುರದ ಮೊಳಹಳ್ಳಿ ಅವರ ಊರಾಗಿದ್ದರೂ ಪುತ್ತೂರಿನಲ್ಲಿ ಬೆಳೆದ ಶಿವರಾಯರು ಜಿಲ್ಲೆಯಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಜನರನ್ನು ಒಂದುಗೂಡಿಸಿದ್ದು ಅವರ ಸಾಧನೆ. ಅವರನ್ನು ಸಹಕಾರಿ ಪಿತಾಮಹ ಎಂದು ಕರೆಯುವುದು ಖಂಡಿತ ಉತ್ಪ್ರೇಕ್ಷೆಯಲ್ಲ, ಸಹಕಾರಿ ತತ್ವದಲ್ಲಿನ ನಂಬಿಕೆ ಮತ್ತು ಸಾಧನೆಯಿಂದ ಅವರನ್ನು ಇಂದು ನಾವೆಲ್ಲರೂ ಕೊಂಡಾಡುವಂತಾಯಿತು" ಎಂದು ಮೊಳಹಳ್ಳಿ ಅವರನ್ನು ಸ್ಮರಿಸಿದರು.
ಬಳಿಕ ಮಾತಾಡಿದ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, "ಮೊಳಹಳ್ಳಿ ಶಿವರಾಯರು ಹಾಕಿಕೊಟ್ಟ ತತ್ವದಡಿಯಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ಶ್ರೀಮಂತವಾಗಲಿ. ಸಹಕಾರಿ ತತ್ವದಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬ ಪ್ರತಿಯೊಬ್ಬ ಸಹಕಾರಿ ಬಂಧುವೂ ಕೂಡ ಬ್ಯಾಂಕ್ ನ ವಿವಿಧ ಯೋಜನೆಗಳ ಲಾಭ ಪಡೆದು ಜೀವನದಲ್ಲಿ ಮುಂದೆ ಬರುವಂತಾಗಲಿ. ಮೊಳಹಳ್ಳಿಯವರ ಬದುಕು ಮತ್ತು ಜೀವನ ಗಾಥೆ ನಮ್ಮೆಲ್ಲರಿಗೂ ದಾರಿ ತೋರುವ ದೀವಿಗೆಯಾಗಬೇಕು. ನಿತ್ಯ ನಾವು ಅವರ ಸ್ಮರಣೆಯಲ್ಲಿರಬೇಕು" ಎಂದರು.
ವೇದಿಕೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಗಣನಾಥ ಶೆಟ್ಟಿ ಎಕ್ಕಾರ್, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಕೆಎಂಎಫ್ ಜಿಲ್ಲಾಧ್ಯಕ್ಷ ಸುಚರಿತ ಶೆಟ್ಟಿ, ರವೀಂದ್ರ ಕಂಬಳಿ, ರವೀಶ್, ನಿರ್ದೇಶಕರಾದ ವಿನಯ್ ಕುಮಾರ್ ಸೂರಿಂಜೆ, ಜಯಕರ ಶೆಟ್ಟಿ ಇಂದ್ರಾಳಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಭಾಸ್ಕರ್ ಕೋಟ್ಯಾನ್, ಟಿ.ಜಿ. ರಾಜಾರಾಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಗೋಪಿನಾಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.