ವಿಶ್ವಚೆಸ್ ಫೈನಲ್ 2ನೇ ಪಂದ್ಯವೂ ಡ್ರಾ ಜಗತ್ತಿನ ನಂಬರ್ ವನ್ ಆಟಗಾರನನ್ನೇ ಹಿಮ್ಮೆಟ್ಟಿಸಿದ ಆರ್.ಪ್ರಜ್ಞಾನಂ ದ
Thursday, August 24, 2023
ನವದೆಹಲಿ: ಫಿಡೆ ರೇಟೆಡ್ ವಿಶ್ವ ಚೆಸ್ ಟೂರ್ನಮೆಂಟ್ ನ ಫೈನಲ್ ಸ್ಪರ್ಧೆಯಲ್ಲಿ ಎರಡನೇ ಪಂದ್ಯದಲ್ಲೂ ಭಾರತದ ಅತಿ ಕಿರಿಯ ಆಟಗಾರ ಆರ್. ಪ್ರಜ್ಞಾನಂದ ಡ್ರಾ ಸಾಧನೆ ಮಾಡಿದ್ದಾರೆ.
ಜಗತ್ತಿನ ನಂಬರ್ ವನ್ ಆಟಗಾರ ನಾರ್ವೆ ಮೂಲದ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಎರಡನೇ ಫೈನಲ್ ಪಂದ್ಯವನ್ನು ಆರ್.ಪ್ರಜ್ಞಾನಂದ ಆಡಿದ್ದಾರೆ. ಇದರಲ್ಲೂ ಅವರು ಡ್ರಾ ಮಾಡಿಕೊಂಡಿದ್ದಾರೆ. ಮಂಗಳವಾರ ಮೊದಲ ಪಂದ್ಯವೂ 35 ನಡೆಗಳೊಂದಿಗೆ ಡ್ರಾ ಆಗಿತ್ತು. ಎರಡನೇ ಪಂದ್ಯದಲ್ಲಿ ಕೇವಲ 30 ನಡೆಗಳಲ್ಲಿ ಪಂದ್ಯವನ್ನು ಡ್ರಾ ಮಾಡಿದ್ದು, ವಿಶ್ವ ಚೆಸ್ ಆಟಗಾರರ ಹುಬ್ಬೇರುವಂತೆ ಮಾಡಿದೆ. ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಕೂಡ 18 ವರ್ಷದ ಪ್ರಜ್ಞಾನಂದ ಆಟವನ್ನು ಶ್ಲಾಘಿಸಿದ್ದಾರೆ.
ಅಜರ್ ಬೈಜಾನಿನ ಬಾಕು ನಗರದಲ್ಲಿ ವಿಶ್ವ ಚೆಸ್ ಟೂರ್ನಿ ನಡೆಯುತ್ತಿದ್ದು, ಭಾರತದ ಪ್ರಜ್ಞಾನಂದ ಚೆಸ್ ಜಗತ್ತಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಮೊದಲ ಫೈನಲ್ ಪಂದ್ಯವು ನಾಲ್ಕು ಗಂಟೆಗಳ ಸುದೀರ್ಘ ಕಾಲ ನಡೆದಿದ್ದರೆ, ಎರಡನೇ ಪಂದ್ಯವು ಕೇವಲ ಒಂದು ಗಂಟೆಯಲ್ಲಿ ಮುಗಿದಿತ್ತು, ಚೆಸ್ ವಿಶ್ವಕಪ್ ವಿಜೇತ ಯಾರು ಅನ್ನುವುದನ್ನು ನಿರ್ಧರಿಸಲು ಗುರುವಾರ ಬಿರುಸಿನ ನಡೆಯ ಟೈ ಬ್ರೇಕರ್ ಪಂದ್ಯ ನಡೆಯಲಿದೆ.
ಅಂದಹಾಗೆ, ವಿಶ್ವ ಚೆಸ್ ಟೂರ್ನಿಯ ಫೈನಲ್ ಸುತ್ತು ಪ್ರವೇಶಿಸಿದ ಭಾರತದ ಎರಡನೇ ಆಟಗಾರನೆಂಬ ಶ್ರೇಯವೂ ಪ್ರಜ್ಞಾನಂದ ಅವರಿಗೆ ಸಂದಿದೆ. ಈ ಮೊದಲು ವಿಶ್ವನಾಥನ್ ಆನಂದ್ ಮಾತ್ರ ಫೈನಲ್ ಸುತ್ತು ಪ್ರವೇಶ ಮಾಡಿದ್ದು ಮತ್ತು ವಿಶ್ವ ಚೆಸ್ ಮಾಸ್ಟರ್ ಆಗಿರುವ ಸಾಧನೆ ಮಾಡಿದ್ದರು. ಸದ್ಯ ಪ್ರಜ್ಞಾನಂದ ವಿಶ್ವ ಚೆಸ್ ರ್ಯಾಂಕಿಂಗ್ ನಲ್ಲಿ 23ನೇ ಶ್ರೇಯಾಂಕದ ಆಟಗಾರನಾಗಿದ್ದರೆ, ಮ್ಯಾಗ್ನಸ್ ಕಾರ್ಲ್ಸನ್ ನಂಬರ್ ಆಟಗಾರ, ಗುರುವಾರದ ಮೂರನೇ ಪಂದ್ಯದಲ್ಲಿ ನಂಬರ್ ವನ್ ಆಟಗಾರನನ್ನು ಪ್ರಜ್ಞಾನಂದ ಸೋಲಿಸಿದರೆ, ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.