ಸುಳ್ಯ: ಚಂದ್ರಯಾನ 3 ಯಶಸ್ಸಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ವಿಶೇಷ ಸೇವೆ - ರಶೀದಿ ವೈರಲ್
Monday, August 21, 2023
ಸುಳ್ಯ: ಇಸ್ರೋ ಉಡ್ಡಯನ ಮಾಡಿರುವ ನೌಕೆ ಯಶಸ್ವಿಯಾಗಿ ಚಂದ್ರನ ಅಂಗಳ ಪ್ರವೇಶಿಸಲೆಂದು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಚಂದ್ರಯಾನ - 3 ನೌಕೆಯ ಯಶಸ್ವಿಗಾಗಿ ನಾಗರಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಸೇವೆ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಸೇವೆಯ ರಶೀದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಂದ್ರಯಾನ 3 ನೌಕೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಊರ ಹಿರಿಯರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ನಾಗರಕಲ್ಲಿಗೆ ಹಾಲೆರೆದು ನಾಗದೇವರಿಗೆ ಇಷ್ಟವಾದ ಮಹಾಪೂಜೆ ಹಾಗೂ ಕಾರ್ತಿಕ ಪೂಜೆಯನ್ನು ಇಸ್ರೋದ ಹೆಸರಿನಲ್ಲೇ ರಶೀದಿ ಮಾಡಿ ಪೂಜೆ ಮಾಡಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಮಹಾಪೂಜೆ ಹಾಗೂ ಕಾರ್ತಿಕ ಪೂಜೆ ಸೇವೆಯ ರಶೀದಿ ವೈರಲ್ ಆಗಿದೆ.
ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇಶ ವಿದೇಶದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ನೆರವೇರಿಸುತ್ತಾರೆ. ಇದೀಗ ಚಂದ್ರಯಾನ ಯಶಸ್ವಿಗಾಗಿ ಕುಕ್ಕೆ ಸುಬ್ರಹ್ಮಣ್ಯದ ವತಿಯಿಂದಲೇ ಪೂಜೆ-ಪ್ರಾರ್ಥನೆ ಸಲ್ಲಿಸಲಾಗಿದ್ದು ದೇಶದ ಈ ಸಾಧನೆ ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಲಾಗಿದೆ.