ಪ್ರವಾಸಿ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ : 9ಮಂದಿ ಸಾವು, 20ಮಂದಿ ಗಾಯ
Saturday, August 26, 2023
ಚೆನ್ನೈ: ಮಧುರೈ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಲಕ್ಷ್ಮೀ-ರಾಮೇಶ್ವರಂ ಪ್ರವಾಸಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 9 ಮಂದಿ ಮೃತಪಟ್ಟು, 20ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ರೈಲಿನಲ್ಲಿದ್ದ ಪ್ರವಾಸಿಗರು ಮುಂಜಾನೆ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್ ಸೋರಿಕೆಯಾಗಿ ಈ ಸ್ಫೋಟವಾಗಿದೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದೆ. ಆದರೆ ರೈಲಿನ ಕೊನೆಯ ಎರಡು ಬೋಗಿಗಳು ಸಂಪೂರ್ಣ ಸುಟ್ಟು ಹೋಗಿದೆ. ಈ ರೈಲು ಮೇ 17 ರಂದು ಲಕ್ನೋದಿಂದ ಆಧ್ಯಾತ್ಮಿಕ ಪ್ರವಾಸಕ್ಕೆ ಹೊರಟಿತ್ತು.
90 ಮಂದಿ ಉತ್ತರಪ್ರದೇಶದ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಈ ರೈಲು ತಿರುಪತಿ - ರಾಮೇಶ್ವರಂ - ಕನ್ಯಾಕುಮಾರಿ ಮುಂತಾದ ಸ್ಥಳಗಳಿಗೆ ಪ್ರಯಾಣಿಸಬೇಕಿತ್ತು. ಆದರೆ ಮಧುರೈನಲ್ಲಿ ಏಕಾಏಕಿ ರೈಲುಬೋಗಿಯಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ರೈಲನ್ನು ನಿಲ್ಲಿಸಲಾಗಿದೆ. ಬೆಂಕಿ ಹರಡಿದ ಕಂಪಾರ್ಟ್ ಮೆಂಟ್ ಅನ್ನು ಮಾತ್ರ ರೈಲ್ವೆ ಇಲಾಖೆ ಪ್ರತ್ಯೇಕಿಸಿದೆ. ಬಾಕ್ಸ್ ಗೆ ವ್ಯಾಪಿಸಿದ ಬೆಂಕಿಯನ್ನು ಅಗ್ನಿಶಾಮಕದಳದವರು ಸಂಪೂರ್ಣವಾಗಿ ನಂದಿಸಿದ್ದಾರೆ.