ಕುನೋ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು, ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆ
Thursday, August 3, 2023
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಸಾವಿನ ಸರಣಿ ಮುಂದುವರಿದಿದ್ದು ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ಬುಧವಾರ ಬೆಳಗ್ಗೆ ಹೆಣ್ಣು ಚೀತಾ 'ಧಾತ್ರಿ' ಸಾವನ್ನಪ್ಪಿದ್ದು, ಇದರೊಂದಿಗೆ ಕಳೆದ 5 ತಿಂಗಳ ಅವಧಿಯಲ್ಲಿ ಮೃತಪಟ್ಟ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. 'ಧಾತ್ರಿ' ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಬಳಿಕ ಕಾರಣ ಗೊತ್ತಾಗಲಿದೆ ಎಂದು ಉದ್ಯಾನದ ಅಧಿಕಾರಿಗಳು ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಚೀತಾಗಳಿಗೆ ಅಳವಡಿಸಿರುವ ಸಿಂಥೆಟಿಕ್ ಮಾದರಿಯ ರೇಡಿಯೊ ಕಾಲರ್‌ಗಳು ಸಾವಿಗೆ ಕಾರಣವಾಗಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು.
ಇಲ್ಲಿನ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೊಳ್ಳದೇ ಇರುವುದು ಅಥವಾ ಪರಸ್ಪರ ಕಾಳಗ, ಅನಾರೋಗ್ಯ ಚೀತಾಗಳ ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾ ಮತ್ತು ನಂತರದಲ್ಲಿ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ವಯಸ್ಕ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿತ್ತು.
ಇವುಗಳಲ್ಲಿ ಒಂದು ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದರಿಂದ ಸಂತತಿ 24ಕ್ಕೆ ಏರಿಕೆಯಾಗಿತ್ತು. ಆದರೆ ಮೂರು ಮರಿಗಳು ಸೇರಿ ಒಟ್ಟು 9 ಚೀತಾಗಳು ಈಗ ಮೃತಪಟ್ಟಿವೆ. ಉಳಿದ ಚೀತಾಗಳು ಆರೋಗ್ಯವಾಗಿವೆ ಎಂದು ಉದ್ಯಾನದ ಅಧಿಕಾರಿಗಳು ಹೇಳಿದ್ದಾರೆ.