ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ : ಪ್ರವಾಸ ಹೊರಟಿದ್ದವರು ಮತ್ತೆ ಮನೆಗೆ ಮರಳಲೇ ಇಲ್ಲ
Sunday, August 13, 2023
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರು ಲಾರಿಯೊಂದಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಮುಂಜಾನೆ 3:30ರ ವೇಳೆಗೆ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಓರ್ವ ಯುವಕ ಗಾಯಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಗ್ರಾಮದ ನಿವಾಸಿಗಳಾದ ಸಂಗನ ಬಸಪ್ಪ(36), ಅವರ ಪತ್ನಿ ರೇಖಾ(29), ಪುತ್ರ ಅಗಸ್ತ್ಯ (8) ಹಾಗೂ ಸಂಬಂಧಿ ಭೀಮಾಶಂಕರ್ (26) ಮೃತಪಟ್ಟವರು. ಅಲ್ಲದೆ
ಸಂಗನ ಬಸಪ್ಪ ದಂಪತಿಯ ಮಕ್ಕಳಾದ ಅನ್ವಿತಾ(6), ಆದರ್ಶ(4) ಹಾಗೂ ಸುಮಾರು 26 ವರ್ಷದ ಮತ್ತೋರ್ವ ಯುವಕ ಗಾಯಗೊಂಡಿದ್ದಾನೆ. ಇವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಾರಂತ್ಯದ ಹಿನ್ನೆಲೆಯಲ್ಲಿ ಸಂಗನ ಬಸಪ್ಪ ಕುಟುಂಬ ಸಹಿತ ಕಾರಿನಲ್ಲಿ ವಿಜಯಪುರದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೊರಟಿದ್ದರು. ಇವರು ಶನಿವಾರ ರಾತ್ರಿ 11ಗಂಟೆಗೆ ಮನೆಯಿಂದ ಕಾರಿನಲ್ಲಿ ಹೊರಟಿದ್ದರು. ಇಂದು ಮುಂಜಾನೆ 3:30ರ ಸುಮಾರಿಗೆ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿದ್ದ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ರಾತ್ರಿಯಿಡೀ ಕಾರು ಚಲಾಯಿಸಿದ್ದರಿಂದ ನಿದ್ದೆ ಮಂಪರಿನಲ್ಲಿ ಈ ಅಪಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.