ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಮಕ್ಕಳು ದಾರುಣ ಸಾವು: ಮೂವರು ಗಂಭೀರ
Thursday, August 10, 2023
ರಾಮನಗರ: ಟ್ಯೂಷನ್ ಮುಗಿಸಿ ರಸ್ತೆಬದಿಯಲ್ಲಿ ನಡೆದುಕೊಂಡು ಮನೆಗೆ ನಡೆದುಕೊಂಡು ಮರಳುತ್ತಿದ್ದ ಮಕ್ಕಳಿಬ್ಬರು ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾದ ಪ್ರಕರಣವೊಂದು ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಉಳಿದ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ರೋಹಿತ್ (5), ಶಾಲಿನಿ (8) ಮೃತಪಟ್ಟ ಮಕ್ಕಳು. ಸುಚಿತ್, ಗೌತಮಿ, ಲೇಖನ ಎಂಬ ಮೂವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.
ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಈ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಸಾವು-ನೋವುಗಳಾಗಿವೆ. ಗಾಯಗೊಂಡ ಮಕ್ಕಳನ್ನು ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ಸಾವಿಗೀಡಾದ್ದಾರೆ. ಉಳಿದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಕ್ಕಳಿಗೆ ಗೂಡ್ಸ್ ವಾಹನ ಗುದ್ದಿದ ಬಳಿಕವೂ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಬಳಿಕ ಬೇರೆಡೆ ವಾಹನ ನಿಲ್ಲಿಸಿ ತಲೆಮರೆಸಿಕೊಂಡಿದ್ದಾನೆ. ಆಸ್ಪತ್ರೆಗೆ ಎಎಸ್ಪಿ ಸುರೇಶ್ ಭೇಟಿ ನೀಡಿದ್ದು, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.