ಬಂಟ್ವಾಳದಲ್ಲಿ ಯುವತಿ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ- ಆರೋಪಿ ಬಂಧನ
Tuesday, August 29, 2023
ಮಂಗಳೂರು: ಯುವತಿ ಯೊಬ್ಬಳು ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
ಬಂಟ್ವಾಳ ನಿವಾಸಿ ಜಗದೀಪ್ ಆಚಾರ್ಯ (32) ಬಂಧಿತ ಆರೋಪಿ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ.
ಆಗಷ್ಟ್ 28 ರಂದು ರಾತ್ರಿ ಯುವತಿ ಎಂದಿನಂತೆ ತಮ್ಮ ಹಂಚಿನ ಮನೆಯೊಳಗಿರುವ ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿಯೋರ್ವ ಹೊರಗಡೆಯಿಂದ ಗೋಡೆಯ ಸೆರೆಯ ಮದ್ಯೆ ತನ್ನ ಮೊಬೈಲ್ ಮೂಲಕ ವಿಡಿಯೋ ಮಾಡುತ್ತಿದ್ದ ಎಂದು ದೂರು ದಾಖಲಾಗಿತ್ತು.
ಯುವತಿ ಸ್ನಾನ ಮಾಡುತ್ತಿರುವುದನ್ನು ಸೆರೆ ಹಿಡಿಯುವುದನ್ನು ಗಮನಿಸಿ ತಕ್ಷಣ ಬೊಬ್ಬೆ ಹಾಕಿದ್ದಳು. ಆಗ ಆ ವ್ಯಕ್ತಿಯು ಅಲ್ಲಿಂದ ಓಡಿಹೋಗಿದ್ದನು. ಬಳಿಕ ಯುವತಿಯ ಬೊಬ್ಬೆ ಕೇಳಿ ತಾಯಿ ಹಾಗೂ ಅಕ್ಕಪಕ್ಕದ ಮನೆಯವರು ಬಂದು ಓಡಿ ಹೋದ ಅಪರಿಚಿತ ವ್ಯಕ್ತಿಯ ಹುಡುಕಾಟ ಮಾಡಿದಾಗ ಈ ವ್ಯಕ್ತಿಯು ಕಂಡು ಬಂದಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ: 354 (D), 354 (C) ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.