ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನ
Saturday, August 12, 2023
ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಹಿಂದುತ್ವ ಹಾಗೂ ಗೋರಕ್ಷಣೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡರಾತ್ರಿಯೇ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೆರೆಹಳ್ಳಿಯ ಪುನೀತ್, ಬೆಂಗಳೂರಿನ ಜೆ.ಪಿ.ನಗರ 7ನೇ ಹಂತದಲ್ಲಿ ವಾಸ್ತವ್ಯವಿದ್ದ. ಈತ ರಾಷ್ಟ್ರ ರಕ್ಷಣಾ ಪಡೆ ಹೆಸರಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದ್ದ. ಇದ್ರೀಸ್ ಪಾಷಾ ಕೊಲೆ ಆರೋಪಿಯೂ ಆಗಿದ್ದ. ಎಲ್ಲ ಕೃತ್ಯಗಳ ಬಗ್ಗೆ ವರದಿ ಸಿದ್ಧಪಡಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಗಳು ತಿಳಿಸಿವೆ. ಅಪರಾಧ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಜೂನ್ 28ರಂದು ಸಹಾಯಕ ಪೊಲೀಸ್ ಆಯುಕ್ತರು ಪುನೀತ್ ಕೆರೆಹಳ್ಳಿಗೆ ನೋಟಿಸ್ ಜಾರಿ ಮಾಡಿದ್ದರು. ಅದರಲ್ಲಿ 'ಹಲವು ಪ್ರಕರಣಗಳ ಆರೋಪಿಯಾಗಿರುವ ನೀವು ಸ್ಪಷ್ಟಿಕರಣ ನೀಡದಿದ್ದಲ್ಲಿ ನಿಮ್ಮವಿರುದ್ಧ ರೌಡಿಶೀಟರ್ ಪಟ್ಟಿ ತೆರೆಯುತ್ತೇವೆ' ಎಂದು ಎಚ್ಚರಿಸಿದ್ದರು ಎಂದು ತಿಳಿದು ಬಂದಿದೆ.
ಈತನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎರಡು, ಡಿಜೆ ಹಳ್ಳಿ, ಕಗ್ಗಲೀಪುರ, ಹಂಪಿ, ಮಳವಳ್ಳಿ, ಹಲಸೂರು, ಚಾಮರಾಜಪೇಟೆ, ಇಲೆಕ್ಟ್ರಾನ್ ಸಿಟಿ, ಸಾತನೂರು ಪೊಲೀಸ್ ಠಾಣೆಗಳಲ್ಲಿ ಒಂದೊಂದು ಪ್ರಕರಣ ದಾಖಲಾಗಿವೆ.