ಕಾಲೇಜು ವಿದ್ಯಾರ್ಥಿನಿಯರ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಇನ್ ಸ್ಟಾಗ್ರಾಂನಲ್ಲಿ ಶೇರ್ - ಆರೋಪಿ ಹಳೆಯ ವಿದ್ಯಾರ್ಥಿ ಅರೆಸ್ಟ್
Wednesday, August 9, 2023
ಹುಬ್ಬಳ್ಳಿ: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಅವುಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಪ್ರಕರಣದಲ್ಲಿ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಜನಿಕಾಂತ್ ತಳವಾರ(21) ಬಂಧಿತ ಆರೋಪಿ.
ಈ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಸಂತೋಷ್ ಬಾಬು, 'ಕಡಿಮೆ ದಾಖಲಾತಿ ಇರುವ ಹಿನ್ನೆಲೆಯಲ್ಲಿ ಆರೋಪಿಗೆ ಈ ಬಾರಿ ಕಾಲೇಜಿನಲ್ಲಿ ಅಡ್ಮಿಷನ್ ನೀಡಿರಲಿಲ್ಲ. ಅದಕ್ಕಾಗಿ ಬಾಯ್ ಫ್ರೆಂಡ್ ಇರುವ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಆತ ಸುಮಾರು 10 ಮಂದಿ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವೈರಲ್ ಮಾಡಿದ್ದ. ಸದ್ಯ ಆರೋಪಿಯ ಇಮೇಲ್ ಐಡಿ, ಸಾಮಾಜಿಕ ಜಾಲತಾಣಗಳ ವಿವರಗಳನ್ನು ವಿಧಿ ವಿಜ್ಞಾನಕ್ಕೆ ರವಾನೆ ಮಾಡಲಾಗಿದೆ.
ಮೂರು ದಿನಗಳ ಹಿಂದೆಯೇ ಆತನನ್ನು ವಶಪಡಿಸಿಕೊಂಡಿದ್ದೇವೆ. ಆತನ ಜೊತೆ ಬೇರೆಯವರು ಇರಬಹುದು ಎಂಬ ಬಗ್ಗೆ ಅನುಮಾನ ಇದ್ದು ಈ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ' ಎಂದು ತಿಳಿಸಿದರು.
ಆರೋಪಿ ತಾಕತ್ ಇದ್ದಲ್ಲಿ ತನ್ನನ್ನು ಬಂಧಿಸುವಂತೆ ಇನ್ ಸ್ಟಾಗ್ರಾಮ್ ನಲ್ಲಿ ಪೊಲೀಸರಿಗೆ ಸವಾಲು ಹಾಕಿದ್ದ. ಇದೀಗ ಹುಬ್ಬಳ್ಳಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಜೂನ್ 20ರಿಂದಲೇ ಆರೋಪಿಯು ಇನ್ ಸ್ಟಾಗ್ರಾಮ್ ನಲ್ಲಿ ಕಾಶ್ಮೀರಿ 1990_0 ಹೆಸರಿನ ನಕಲಿ ಖಾತೆ ಸೃಷ್ಟಿಸಿ, ವಿದ್ಯಾರ್ಥಿನಿಯರ ಫೋಟೋಗಳನ್ನು ಕೆಟ್ಟದಾಗಿ ಎಡಿಟ್ ಮಾಡಿರುವ ಬಗ್ಗೆ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ದೂರು ಕೊಡೋಕೆ ಹೋಗಿಲ ಎಂದು ನಾಲರು ವಿದ್ಯಾರ್ಥಿನಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.