ಪುತ್ತೂರು: ಅಣಬೆ ಮೂಡಿದೆ ಎಂದು ಗುಡ್ಡಕ್ಕೆ ಕರೆದೊಯ್ದು ಮಹಿಳೆಯರಿಬ್ಬರ ಕೊಲೆಗೆತ್ನ - ಆರೋಪಿ ಅರೆಸ್ಟ್
Wednesday, August 23, 2023
ಪುತ್ತೂರು: ದುಷ್ಕರ್ಮಿಯೊಬ್ಬನು ಗುಡ್ಡದಲ್ಲಿ ಅಣಬೆ ಮೂಡಿದೆ ಎಂದು ಮಹಿಳೆರಿಬ್ಬರನ್ನು ಉಪಾಯದಲ್ಲಿ ಕರೆದೊಯ್ದು, ಅವರಿಬ್ಬರ ಕತ್ತು ಬಿಗಿದು ಕೊಲೆಗೆತ್ನಿಸಿರುವ ಘಟನೆ ಪುತ್ತೂರಿನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ನಡೆದಿದೆ. ಇದೀಗ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಸುಳ್ಯ ನಿವಾಸಿ ಸುರೇಶ್ ಹತ್ಯೆಗೆತ್ನಿಸಿದ ಆರೋಪಿ. ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಮೂಲೆಗದ್ದೆ ಬಾಣಪದವು ನಿವಾಸಿ ಸುರೇಖಾ (54) ಹಾಗೂ ಗೋಳಿತ್ತೊಟ್ಟು ನಿವಾಸಿ ಗಿರಿಜಾ (52)
ಹಲ್ಲೆಗೊಳಗಾದ ಮಹಿಳೆಯರು.
ಸುರೇಖಾ ಮನೆಯಲ್ಲಿದ್ದುಕೊಂಡು ಗಿರಿಜಾ ಕೂಲಿಕೆಲಸ ಮಾಡುತ್ತಿದ್ದರು. ಸುರೇಖಾ ಮನೆಗೆ ಬಂದಿದ್ದ ಆರೋಪಿ ಸುರೇಶ್ ಗುಡ್ಡದಲ್ಲಿ ಅಣಬೆಗಳು ಮೂಡಿವೆ ಎಂದು ನಂಬಿಸಿ, ಅದನ್ನು ಕೀಳಲು ಗಿರಿಜಾ ಅವರನ್ನು ಗುಡ್ಡೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಕತ್ತಿಗೆ ಟವಲ್ ಬಿಗಿದಿದ್ದಾನೆ. ಈ ವೇಳೆ ಆಕೆ ಪ್ರಜ್ಞಾಹೀನಳಾಗಿ ನೆಲಕ್ಕೆ ಬಿದ್ದಿದ್ದಾರೆ. ಆಕೆಯನ್ನು ಅಲ್ಲೇ ಬಿಟ್ಟು ಮನೆಗೆ ಮರಳಿದ ಸುರೇಶ್ ಬಳಿಕ ಸುರೇಖಾರಲ್ಲಿ, 'ಗಿರಿಜಾ ಅಸ್ವಸ್ಥಗೊಂಡು ಗುಡ್ಡೆಯಲ್ಲಿ ಬಿದ್ದಿದ್ದಾರೆ. ನೀರು ತೆಗೆದುಕೊಂಡು ಬನ್ನಿ' ಎಂದಿದ್ದಾನೆ.
ಅದನ್ನು ನಂಬಿದ ಸುರೇಖಾ ಆತನೊಂದಿಗೆ ಗುಡ್ಡಕ್ಕೆ ಹೋಗಿದ್ದಾರೆ. ಗುಡ್ಡಕ್ಕೆ ಬಂದ ಆಕೆಯ ಕುತ್ತಿಗೆಗೂ ಟವಲ್ ಬಿಗಿದು ಕೊಲೆಗೆಸಿದ್ದಾನೆ. ಅವರ ಬೊಬ್ಬೆ ಕೇಳಿ ಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯರಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಬ್ಬರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡಿದ್ದ ಮಹಿಳೆಯರ ಕಿವಿಯನ್ನು ಹರಿದು ಒಡವೆ ಕಳವುಗೈದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈತ ನಗ - ನಗದು ದೋಚುವ ಉದ್ದೇಶದಿಂದ ಸುರೇಖಾ ಹಾಗೂ ಕೆಲಸದಾಳು ಗಿರಿಜಾರವರಿಗೆ ಹಲ್ಲೆ ನಡೆಸಿ ಕತ್ತು ಬಿಗಿದು ಹಣ ಹಾಗೂ ಚಿನ್ನಾಭರಣಗಳ ಬಗ್ಗೆ ವಿಚಾರಿಸಿದ್ದಾನೆಂದು ದೂರಿನಲ್ಲಿ ಸಂಬಂಧಿಕರು ತಿಳಿಸಿದ್ದಾರೆ. ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.