ಮಂಗಳೂರು: ವಿದ್ಯಾರ್ಥಿಯನ್ನು ಅಪಹರಿಸಿ ಮಾರಣಾಂತಿಕ ಹಲ್ಲೆಗೈದ ಏಳು ಮಂದಿ ಅರೆಸ್ಟ್
Saturday, August 26, 2023
ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿಯನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು ನಿವಾಸಿ ಇಬ್ರಾಹಿಂ ತಾಬೀಶ್(19), ಜೋಡು ಮಾರ್ಗ, ಗೂಡಿನ ಬಳಿ ನಿವಾಸಿ ಅಬ್ದುಲ್ಲಾ ಹನಾನ್ (19), ಸಜಿಪ ಮುನ್ನೂರು ಗ್ರಾಮದ ನಿವಾಸಿ ಮೊಹಮ್ಮದ್ ಶಕೀಫ್(19), ಮೂಡಾ ಗ್ರಾಮ ನಿವಾಸಿ ಮೊಹಮ್ಮದ್ ಶಾಯಿಕ್(19), ಬಜಾಲ್ ನಂತೂರು ಫೈಸಲ್ ನಗರ ನಿವಾಸಿಗಳಾದ ಯು.ಪಿ. ತನ್ವಿರ್(20), ಅಬ್ದುಲ್ ರಶೀದ್(19), ಮೂಡಾ ಗ್ರಾಮ, ಜೋಡು ಮಾರ್ಗ ನಿವಾಸಿ ಮನ್ಸೂರ್(37) ಬಂಧಿತ ಆರೋಪಿಗಳು.
ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ, ಮಂಗಳೂರು ನಗರದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಇಬ್ರಾಹಿಂ ಫಾಹೀಂ(18) ಹಲ್ಲೆಗೊಳಗಾದ ವಿದ್ಯಾರ್ಥಿ. ಹಲ್ಲೆ ನಡೆಸಿದವರು ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು. ಹನಾನ್, ತಬೀಶ್ ಹಾಗೂ ಅವರ ಸಹಚರರ ತಂಡವು ಇಬ್ರಾಹಿಂ ಫಾಹೀಂನನ್ನು ಹುಡುಗಿಯ ವಿಚಾರಕ್ಕೆ ಕಿಡ್ನಾಪ್ ಮಾಡಿ ಖಾಸಗಿ ಫ್ಲ್ಯಾಟ್ ನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಪರಿಣಾಮ ಆತನ ಬೆನ್ನಿನಲ್ಲಿ ಕೆಂಪು ಬಾಸುಂಡೆಗಳು ಎದ್ದಿದ್ದು, ಮಾರಣಾಂತಿಕವಾಗಿ ಗಾಯಗೊಂಡಿದ್ಧಾನೆ.
ಸದ್ಯ ಗಾಯಗೊಂಡಿರುವ ಫಾಹಿಂ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.