ಮದುವೆಯಾಗಿವುದಾಗಿ ನಂಬಿಸಿ ಲಕ್ಷಾಂತರ ಹಣ ವಂಚನೆ : ಹೊಸಕೋಟೆ ಪೊಲೀಸರಿಂದ ಉಡುಪಿಯಲ್ಲಿ ಮಹಿಳೆಯ ಬಂಧನ
Tuesday, August 22, 2023
ವಿಜಯನಗರ: ಮದುವೆಯಾಗುವುದಾಗಿ ಹಲವಾರು ಯುವಕರನ್ನು ನಂಬಿಸಿ ಅವರಿಂದಲೇ ಹಣ ಪಡೆದು ವಂಚಿಸಿರುವ ಮಹಿಳೆಯನ್ನು ವಿಜಯನಗರ ಜಿಲ್ಲೆಯ ಹೊಸಕೋಟೆ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವಾಸವಿದ್ದ ತಬಸ್ಸುಮ್ ಎಂಬಾಕೆಯೇ ಬಂಧಿತ ಮಹಿಳೆ.
ಹೊಸಕೋಟೆ ತಾಲೂಕಿನಲ್ಲಿ ಯುವಕರನ್ನು ವಂಚಿಸಿ ಹಣ ದೋಖಾ ಮಾಡಿರುವ ಪ್ರಕರಣದಲ್ಲಿ ಕೋರ್ಟ್ ನಿರ್ದೇಶನದಂತೆ ಈಕೆಯ ಮೇಲೆ ಹೊಸಕೋಟೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿ ಮಹಿಳೆಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದು, ಆಗಸ್ಟ್ 19ರಂದು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ತಬಸ್ಸುಮ್ ಮೇಲೆ ಮದುವೆಯಾಗುವುದಾಗಿ ನಂಬಿಸಿ ಯುವಕರಿಂದ ಹಣ ಪಡೆಯುವುದು, ಬ್ಯಾಂಕ್ ಲೋನ್ ಮಾಡಿಸುವುದಾಗಿ ಹೇಳಿ ವಂಚಿಸುವುದು, ಸರಕಾರಿ ಕೆಲಸ ತೆಗೆಸಿಕೊಡುತ್ತೇನೆಂದು ಹೇಳಿ ವಂಚನೆ ಮಾಡಿರುವುದು, ಅಲ್ಪಸಂಖ್ಯಾತ ಇಲಾಖೆಯ ಯೋಜನೆಯಡಿ ಆಟೋ, ಆಂಬುಲೆನ್ಸ್ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದು ಇತ್ಯಾದಿ ಹಲವಾರು ರೀತಿಯ ದೂರುಗಳು ಇದೆ. ಈ ಹಿನ್ನೆಲೆಯಲ್ಲಿ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವಿಜಯನಗರ ಎಸ್ಪಿ ಶ್ರೀಹರಿ ಬಾಬು ತಿಳಿಸಿದ್ದಾರೆ. ಈ ಹಿಂದೆ ಉಡುಪಿಯಲ್ಲಿ ಇದೇ ರೀತಿ ಹಲವರಿಗೆ ಮೋಸ ಎಸಗಿದ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ಮುಂದುವರಿದಿದೆ ಎಂದವರು ತಿಳಿಸಿದ್ದಾರೆ.