-->
ಪತಿಯನ್ನು ಅರಸಿ ಭಾರತಕ್ಕೆ ಆಗಮಿಸಿದ ಬಾಂಗ್ಲಾದ ಮಹಿಳೆಗೆ ಕಾದಿತ್ತು ಬಿಗ್ ಶಾಕ್

ಪತಿಯನ್ನು ಅರಸಿ ಭಾರತಕ್ಕೆ ಆಗಮಿಸಿದ ಬಾಂಗ್ಲಾದ ಮಹಿಳೆಗೆ ಕಾದಿತ್ತು ಬಿಗ್ ಶಾಕ್


ಲಕ್ನೋ: ಇತ್ತೀಚೆಗೆ ದೇಶ ಗಡಿ ಮೀರಿದ ಪ್ರೇಮ ಪ್ರಕರಣಗಳೇ ಭಾರೀ ಸುದ್ದಿಯಲ್ಲಿದೆ. ಪಾಕಿಸ್ತಾನದ ಸೀಮಾ ಹೈದರ್​ ತಮ್ಮ ಪ್ರಿಯಕರನಿಗಾಗಿ ದೇಶದ ಗಡಿ ದಾಟಿ ಬಂದರೆ, ಭಾರತದ ಅಂಜು ಗಡಿ ದಾಟಿ ಹೋಗಿದ್ದಾಳೆ. ಅಲ್ಲದೆ ಶ್ರೀಲಂಕಾದ ಯುವತಿಯೊಬ್ಬಳು ಪ್ರಿಯರನನ್ನು ಅರಸಿ ಭಾರತ ಪ್ರವೇಶಿಸಿದ್ದಳು. ಈ ಗಡಿದಾಟಿದ ಪ್ರೇಮಕಥೆಗಳ ನೆನಪು ಮಾಸುವ ಮುನ್ನವೇ ಅದೇ ರೀತಿಯ ಪ್ರೇಮ ಪ್ರಕರಣವೊಂದು ಈ ಲಿಸ್ಟ್ ಗೆ ಹೊಸದಾಗಿ ಸೇರ್ಪಡೆಯಾಗಿದೆ.

ಬಾಂಗ್ಲಾದೇಶದ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗುವಿನೊಂದಿಗೆ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಇಲ್ಲಿ ಬಂದ ಬಳಿಕ ಆಕೆಯ ಪತಿಯ ವಿಚಾರ ತಿಳಿದು ಮಹಿಳೆ ಕಂಗಾಲಾಗಿದ್ದು, ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಉತ್ತರಪ್ರದೇಶದ​ ನೊಯ್ಡಾದ ನಿವಾಸಿ ಸೌರಭ್ ಕಾಂತ್​​ ತಿವಾರಿ 2017ರಲ್ಲಿ ಉದ್ಯೋಗದ ನಿಮಿತ್ತ ಬಾಂಗ್ಲಾದೇಶಕ್ಕೆ ತೆರಳಿದ್ದನು. ಅಲ್ಲಿಯೇ ಇದ್ದ ಆತ ಕೆಲ ವರ್ಷಗಳ ಬಳಿಕ ಸಾನ್ಯ ಅಖ್ತರ್​ ಎಂಬಾಕೆಯನ್ನು ವಿವಾಹವಾಗಿದ್ದ. ಇಬ್ಬರ ದಾಂಪತ್ಯದ ಫಲವಾಗಿ ಮಗುವೊಂದು ಜನಿಸಿದ ಕೆಲ ತಿಂಗಳುಗಳ ಬಳಿಕ ಸೌರಭ್​ ಭಾರತಕ್ಕೆ ವಾಪಸ್​ ಆಗಿದ್ದು, ಬಾಂಗ್ಲಾದೇಶದತ್ತ ಹೋಗಿಲ್ಲ.

ವರ್ಷಗಳು ಕಳೆದರೂ ತನ್ನ ಪತಿ ಬಾರದೇ ಇರುವುದರಿಂದ ಅನುಮಾನಗೊಂಡ ಮಹಿಳೆ ಆತನನ್ನು ಹುಡುಕಿಕೊಂಡು ನೊಯ್ಡಾಗೆ ಬಂದಿದ್ದಾಳೆ. ಇಲ್ಲಿ ಆಕೆ ಪತಿಗೆ ಈಗಾಗಲೇ ಬೇರೊಂದು ಮದುವೆಯಾಗಿರುವುದನ್ನು ನೋಡಿ ಕಂಗಾಲಾಗಿದ್ದಾಳೆ. ಬಳಿಕ ಈ ಬಗ್ಗೆ ಆತನ ಬಳಿ ಮಾತನಾಡಿದಾಗ ನಿನ್ನೊಂದಿಗೆ ಸಂಸಾರ ನಡೆಸಲು ಇಷ್ಟವಿಲ್ಲ ಎಂದು ಸೌರಭ್​ ಮಹಿಳೆಗೆ ಹೇಳಿ ಕಳುಹಿಸಿದ್ದಾನೆ. ಪತಿಯ ಹೇಳಿಕೆಯಿಂದ ತೀವ್ರ ಅಘಾತಕ್ಕೊಳಗಾದ ಮಹಿಳೆ ತನಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ ಸ್ಥಳೀಯ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಢಾಕಾ ಮೂಲದ ಮಹಿಳೆ ಸಾನ್ಯ ಅಖ್ತರ್​ ಸೌರಭ್ ಕಾಂತ್ ತಿವಾರಿ ಎಂಬ ವ್ಯಕ್ತಿಯು ತನ್ನನ್ನು ಎಪ್ರಿಲ್ 14 2021ರಂದು ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಮಹಿಳೆ ಮತ್ತು ಸೌರಭ್​ಗೆ ಒಬ್ಬ ಪುತ್ರ ಕೂಡ ಇದ್ದಾನೆ. ಆದರೆ ಸೌರಭ್ ಈಗಾಗಲೇ ಮದುವೆಯಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿರುವುದಾಗಿ ಹಿರಿಯ ಪೊಲೀಸ್​​ ಅಧಿಕಾರಿ ತಿಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article