ಮಂಗಳೂರು: ಉಡುಪಿ ಶೌಚಾಲಯದಲ್ಲಿ ಮೊಬೈಲ್ ಪ್ರಕರಣ ಇಷ್ಟುಬೇಗ ಎಸ್ಐಟಿಗೆ ಕೊಡುವ ಅವಶ್ಯಕತೆಯಿಲ್ಲ - ಸಿಎಂ
Tuesday, August 1, 2023
ಮಂಗಳೂರು: ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿರುವ ಸಿದ್ದರಾಮಯ್ಯನವರು ಇದೀಗ ತಾನೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ವೇಳೆ ಮಾಧ್ಯಮದವರೊಂದಿಗೆ ಉಡುಪಿ ಪ್ಯಾರ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿನ ಮೊಬೈಲ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಇಷ್ಟುಬೇಗ ಈ ಪ್ರಕರಣವನ್ನು ಎಸ್ಐಟಿಗೆ ಕೊಡುವ ಅವಶ್ಯಕತೆಯಿಲ್ಲ. ಡಿವೈಎಸ್ ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಮುಂದುವರೆಯಲಿ ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರೇ ಅಲ್ಲಿ ಕ್ಯಾಮರಾ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದ್ದಲ್ಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಈ ಬಗ್ಗೆ ಈಗಾಗಲೇ ಪೊಲೀಸರು ಸಾಕಷ್ಟು ಕ್ರಮಕೈಗೊಂಡಿದ್ದಾರೆ ಎಂದರು.
ಸೌಜನ್ಯಾ ರೇಪ್ ಆ್ಯಂಡ್ ಮರ್ಡರ್ ಪ್ರಕರಣವನ್ನು ಸಿಬಿಐಗೆ ಕೊಡಲಾಗಿತ್ತು. ಇದೀಗ ಸೌಜನ್ಯಾ ಹೆತ್ತವರು ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನಾತ್ಮಕವಾಗಿ ಏನು ಮಾಡಲಾಗುತ್ತದೆ ಎಂದು ನೋಡುತ್ತೇವೆ. ನ್ಯಾಯಾಲಯಕ್ಕೆ ಮತ್ತೆ ಅಫೀಲ್ ಹಾಕಬೇಕಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಅಥವಾ ಯಾರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲಿ, ಅಥವಾ ಇನ್ನೇನಾದರೂ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.