ಮಂಗಳೂರು: ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಕಾಂಗ್ರೆಸ್ ಮುಖಂಡ ಅರೆಸ್ಟ್
Monday, August 14, 2023
ಮಂಗಳೂರು: ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ದೂರವಾಣಿ ಕರೆಯಲ್ಲಿ ಆವಾಜ್ ಹಾಕಿ ಬೆದರಿಕೆಯೊಡ್ಡಿರುವ ಆರೋಪದ ಮೇಲೆ ಉರ್ವ ಠಾಣಾ ಪೊಲೀಸರು ಕಾಂಗ್ರೆಸ್ ಮುಖಂಡನನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡ, ಶಕ್ತಿನಗರ ನಿವಾಸಿ ರೌಡಿಶೀಟರ್ ಪುನೀತ್ ಶೆಟ್ಟಿ ಬಂಧಿತ ಆರೋಪಿ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆಂದು ಹೇಳಲಾಗಿರುವ ಪುನೀತ್ ಶೆಟ್ಟಿ ಉರ್ವ ಪೊಲೀಸ್ ಠಾಣಾಧಿಕಾರಿಗೆ ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡಿದ್ದಾನೆಂದು ಆರೋಪಿಸಲಾಗಿದೆ. ಅದರಂತೆ ಐಪಿಸಿ ಸೆಕ್ಷನ್ 353, 506, 507ರಡಿಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನಿಂದ ಪರವಾನಿಗೆ ಇರುವ ಪಿಸ್ತೂಲು ಹಾಗೂ 6 ಸಜೀವ ಗುಂಡು, ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪುನೀತ್ ಶೆಟ್ಟಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.