ಉಳ್ಳಾಲ: ಪುಂಜಾಲಕಟ್ಟೆಯಲ್ಲಿ ನಾಪತ್ತೆಯಾದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ
Sunday, August 13, 2023
ಉಳ್ಳಾಲ: ಬೆಳ್ತಂಗಡಿಯ ಪುಂಜಾಲಕಟ್ಟೆಯಲ್ಲಿ ಶುಕ್ರವಾರದಂದು ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ಉಳ್ಳಾಲ ಉಳಿಯದ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಬಳ್ಳಮಂಜ ನಿವಾಸಿ ತನಿಯರವರ ರಾಜೇಶ್ (27) ಮೃತಪಟ್ಟ ಯುವಕ. ರಾಜೇಶ್ ಶುಕ್ರವಾರ ಸಂಜೆ 4 ಗಂಟೆಗೆ ಮನೆಯಿಂದ ಬಂದಿದ್ದರು. ಆ ಬಳಿಕ ಅವರು ಮನೆಗೆ ವಾಪಾಸ್ ಆಗಿರಲಿಲ್ಲ. ಈ ಬಗ್ಗೆ ಪೋಷಕರು ಪುಂಜಾಲಕಟ್ಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಿನ್ನೆ ಮಂಗಳೂರಿನ ನೇತ್ರಾವತಿ ಸೇತುವೆಯಲ್ಲಿ ರಾಜೇಶ್ ಬೈಕ್ ದೊರಕಿದೆ.
ಇಂದು ಬೆಳಗ್ಗೆ ಉಳ್ಳಾಲ ಉಳಿಯದ ನೇತ್ರಾವತಿ ನದಿಯಲ್ಲಿ ತೇಲುತ್ತಿದ್ದ ಮೃತದೇಹವನ್ನು ಸ್ಥಳೀಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿಸೋಜ ಮತ್ತು ಸ್ನೇಹಿತರು ಎಳೆದು ದಡಕ್ಕೆ ಹಾಕಿದ್ದಾರೆ. ಸ್ಥಳಕ್ಕೆ ತೆರಳಿದ ಉಳ್ಳಾಲ ಪೊಲೀಸರು ಮೃತದೇಹವನ್ನು ಜಿಲ್ಲಾ ವೆಸ್ಲಾಕ್ ಆಸ್ಪತ್ರೆಗೆ ರವಾನಿಸಿದ್ದು ರಾಜೇಶ್ ಪೋಷಕರು ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.