ಒಂದು ಗಂಡುಮಗುವಿದ್ದರೂ, ಮತ್ತೊಂದು ಗಂಡು ಮಗುವಿಲ್ಲವೆಂದು ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ: ಮಕ್ಕಳು ಸಾವು, ತಾಯಿ ಬಚಾವ್
Saturday, August 26, 2023
ಬಾಗಲಕೋಟೆ: ಓರ್ವ ಗಂಡು ಮಗುವಿದ್ದರೂ ಮತ್ತೆ ಗಂಡು ಮಗುವಾಗಿಲ್ಲವೆಂದು ಮಹಿಳೆಯೊಬ್ಬಳು ಮೂವರು ಮಕ್ಕಳ ಸಹಿತ ಬಾವಿಗೆ ಹಾರಿದ್ದಾಳೆ. ಆದರೆ ಕೊನೆಗೆ ಮೂವರು ಮಕ್ಕಳೂ ಸಾವಿಗೀಡಾಗಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಬಾರಹಳ್ಳದಲ್ಲಿ ನಡೆದಿದೆ.
ಸಂಗೀತಾ ಗುಡೆಪ್ಪನವರ್ ಕೃತ್ಯ ಎಸಗಿದ ತಾಯಿ. ಈಕೆಯ 17 ದಿನಗಳ ಹೆಣ್ಣು ಮಗು ಸೌಜನ್ಯಾ, ಪುತ್ರ ಶ್ರೀಶೈಲ (5), ಮಗಳು ಶ್ರಾವಣಿ (3) ಸಾವಿಗೀಡಾಗಿರುವ ಮಕ್ಕಳು.
ಸಂಗೀತಾಗೆ ಇತ್ತೀಚೆಗೆ ಹೆರಿಗೆ ಆಗಿದೆ. ಆದರೆ ಆಕೆಗೆ ಮೂರನೇ ಮಗು ಗಂಡೇ ಆಗಬೇಕೆಂಬ ಆಸೆ ಇತ್ತು. ಆದರೆ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದರಿಂದ ತೀವ್ರವಾಗಿ ಮನನೊಂದ ಈಕೆ ಹಸಗೂಸು ಸೇರಿ ಮೂವರು ಮಕ್ಕಳೊಂದಿಗೆ ಹೊಲದಲ್ಲಿದ್ದ ಬಾವಿಗೆ ಹಾರಿದ್ದಾಳೆ.
ಪತಿ ಹನಮಂತ ಗುಡೆಪ್ಪನವರ್ ತಕ್ಷಣ ರಕ್ಷಣೆಗೆ ಧಾವಿಸಿದ್ದರಿಂದ ಸಂಗೀತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಕ್ಕಳನ್ನು ರಕ್ಷಿಸಲು ತಂದೆ ಹರಸಾಹಸ ಪಟ್ಟಿದ್ದರೂ ಸಾಧ್ಯವಾಗಿಲ್ಲ. ಮಕ್ಕಳನ್ನು ಬಾವಿಗೆ ತಳ್ಳಿದ್ದ ಹಿನ್ನೆಲೆಯಲ್ಲಿ ತಾಯಿ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.