ರೈಲಿನೊಳಗೆ ಆರ್ಪಿಎಫ್ ಎಸ್ಐ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪೊಲೀಸ್ ಕಾನ್ ಸ್ಟೇಬಲ್
Tuesday, August 1, 2023
ನವದೆಹಲಿ: ಆರ್ಪಿಎಫ್ ಕಾನ್ಸ್ಟೆಬಲ್ ಓರ್ವನು ಆರ್ಪಿಎಫ್ ಎಸ್ಐ ಸೇರಿದಂತೆ ಇತರ ಮೂವರನ್ನು ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೇ ಸ್ಟೇಷನ್ ಬಳಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ಪ್ರೆಸ್ ರೈಲಿನೊಳಗೇ ಗುಂಡಿಟ್ಟು ಹತ್ಯೆ ಮಾಡಿರುವ ಪ್ರಕರಣ ನಡೆದಿದೆ.
ಆರ್ಪಿಎಫ್ ಕಾನ್ಸ್ಟೆಬಲ್ ಚೇತನ್ ಸಿಂಗ್ (34) ನಾಲ್ವರನ್ನು ಕೊಂದ ಆರೋಪಿ. ಈತನು ತನ್ನ ಹಿರಿಯ ಸಹೋದ್ಯೋಗಿ, ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಟಿಕಾರಾಮ್ ಮೀನಾ ಸೇರಿದಂತೆ ಅಬ್ದುಲ್ ಖಾದಿರ್ಭಾಯ್ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸದಾರ್ ಮೊಹಮ್ಮದ್ ಹುಸೇನ್ ಎಂಬ ಪ್ರಯಾಣಿಕರನ್ನೂ ಗುಂಡಿಟ್ಟು ಕೊಂದಿದ್ದಾನೆ.
ಕೊಲೆ ಮಾಡಿದ ಬಳಿಕ ರೈಲಿನ ಚೈನ್ ಎಳೆಯಲಾಗಿದೆ. ಈ ವೇಳೆ ರೈಲು ಮೀರಾ ರೋಡ್ ಮತ್ತು ದಹಿಸರ್ ಸ್ಟೇಷನ್ ನಡುವೆ ರೈಲು ನಿಂತಿತ್ತು. ಆಗ ಆರೋಪಿ ಪರಾರಿ ಆಗಲೆತ್ನಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈಲ್ವೇ ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಕಾನ್ಸ್ಟೆಬಲ್ ಮುಂಬೈನ ಭಾವ್ನಗರ ಡಿವಿಜನ್ನಿಂದ ಕಳೆದ ಮಾರ್ಚ್ನಲ್ಲಿ ವರ್ಗಾವಣೆಗೊಂಡಿದ್ದ. ಇತ್ತೀಚೆಗಷ್ಟೇ ತನ್ನ ಊರು ಹತ್ರಾಸ್ಗೆ ಹೋಗಿ ಬಂದಿದ್ದ ಈತ ಜು.17ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದಾನೆ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚೇತನ್ ಸಿಂಗ್ ಸಂಸಾರದೊಂದಿಗೆ ನೆಲೆಸಿದ್ದು, ಪತ್ನಿ, 6 ಮತ್ತು 8 ವರ್ಷದ ಇಬ್ಬರು ಮಕ್ಕಳು ಹಾಗೂ ಪಾಲಕರು ಜೊತೆಗಿದ್ದಾರೆ.
ಈತ ಗುಂಡಿಟ್ಟು ಸಾಯಿಸುವ ಮುನ್ನ ಈತ ಬೆದರಿಕೆ ಒಡ್ಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ. ಕೈಯಲ್ಲಿ ಗನ್ ಹಿಡಿದು ಹೆದರಿಸುತ್ತಿದ್ದ ಚೇತನ್ ಸಿಂಗ್, ಪಾಕಿಸ್ತಾನ ಸಂಪರ್ಕ ಹೊಂದಿದ್ದ ಮೂವರನ್ನು ಕೊಂದಿದ್ದೇನೆ ಎಂದಿದ್ದಾನೆ. ಮಾತ್ರವಲ್ಲ, ಭಾರತದಲ್ಲಿ ಬದುಕಬೇಕಿದ್ದರೆ ಮೋದಿ-ಯೋಗಿಗಷ್ಟೇ ಮತ ಹಾಕಬೇಕು ಎಂದೂ ವಿಡಿಯೋದಲ್ಲಿ ಹೇಳಿರುವುದು ಕೇಳಿಸಿದೆ. ಅದಾಗ್ಯೂ ಈ ವಿಡಿಯೋದ ಸತ್ಯಾಸತ್ಯತೆ ಕುರಿತು ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.