ಇಂಗ್ಲಿಷ್ ಮಾತನಾಡದಿರುವುದಕ್ಕೆ ಶಾಲೆಯಲ್ಲಿ ಘೋರ ಶಿಕ್ಷೆ: ಬಾಲಕನಿಗೆ ಚಪ್ಪಲಿ ಹಾರ ತೊಡಿಸಿ ಮೆರವಣಿಗೆ
Thursday, August 3, 2023
ಮೇಘಾಲಯ: ಇಂಗ್ಲಿಷ್ ಮಾತನಾಡದಿದ್ದಕ್ಕೆ ಆರನೇ ತರಗತಿಯ ವಿದ್ಯಾರ್ಥಿಗೆ ಶಾಲಾ ಆವರಣದಲ್ಲಿಯೇ ಕತ್ತಿಗೆ ಕೊಳಕು ಬೂಟಗಳ ಮಾಲೆಯನ್ನು ತೊಡಿಸಿ ಮೆರವಣಿ ಮಾಡಿರುವ ಹೀನ ಘಟನೆಯೊಂದು ಮೇಘಾಲಯದಲ್ಲಿ ನಡೆದಿದೆ.
ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಮತ್ತು ಸಹ ವಿದ್ಯಾರ್ಥಿಗಳ ಮುಂದೆ ಕೊಳಕು ಪಾದರಕ್ಷೆಗಳನ್ನು ಬಾಲಕನ ಕುತ್ತಿಗೆಗೆ ಹಾರದಂತೆ ಹಾಕಿಸಿ ಮೆರವಣಿಗೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆಯು ತಮ್ಮ ಪುತ್ರನನ್ನು ಕಾನೂನುಬಾಹಿರವಾದ ಶಿಕ್ಷೆಗೆ ಒಳಪಡಿಸಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ದಂಡನೆ ಅತ್ಯಂತ ಕ್ರೂರವಾಗಿದ್ದು ತಮ್ಮ ಪುತ್ರನ ಕುತ್ತಿಗೆಗೆ ಸ್ಲಿಪ್ಪರ್ಗಳನ್ನು ಕಟ್ಟಿರುವುದು ಕಾನೂನುಬಾಹಿರವಾಗಿದೆ. ಆದ್ದರಿಂದ ಈ ಶಿಕ್ಷೆಯು ಖಂಡನೀಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯಾರ್ಥಿಗಳೇ ಹೇಳುವಂತೆ, ಮುಖ್ಯೋಪಾಧ್ಯಾಯರು ಶಾಲಾ ಅಸೆಂಬ್ಲಿಗಳಲ್ಲಿ ಶಿಕ್ಷಿಸಲ್ಪಡುವ ವಿದ್ಯಾರ್ಥಿಗಳ ಹೆಸರನ್ನು ಘೋಷಿಸುತ್ತಾರೆ. ಬಳಿಕ ಚಪ್ಪಲಿಗಳ ಹಾರ ಹಾಕಿಸಿ ಮೆರವಣಿಗೆ ನಡೆಯುತ್ತದೆ. ಇದು ಒಂದು ದಿನ ಬಿಟ್ಟು ಮತ್ತೊಂದು ದಿನ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದು, ಜತೆಗೆ ಶೂಗಳನ್ನು ಕಸದ ತೊಟ್ಟಿಗಳಿಂದ ಎತ್ತಿಕೊಂಡು ಹಾರ ತಯಾರಿಸಲಾಗುತ್ತದೆ ಎಂದು ಆರೋಪಿದ್ದಾರೆ.
ಅಲ್ಲದೆ ಶಾಲೆಯಲ್ಲಿ ಕಸದ ತೊಟ್ಟಿಗಳನ್ನು ನೆಕ್ಕುವುದು, ದೈಹಿಕ ಶಿಕ್ಷೆ ಮತ್ತು ಕೂದಲು ಕತ್ತರಿಸುವುದು ಮುಂತಾದ ಅಮಾನವೀಯ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಆ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಅಮಾಯಕ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುವುದನ್ನು ನಿಲ್ಲಿಸುವಂತೆ ಮಾಡಿ, ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಳ್ಳುತ್ತೇವೆ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಸಚಿವ ರಕ್ಕಂ ಎ ಸಂಗ್ಮಾ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆಗೆ ವರದಿ ನೀಡುವಂತೆ ಹೇಳಿದ್ದಾರೆ. ಘಟನೆಯನ್ನು “ದುರದೃಷ್ಟಕರ’ ಎಂದು ಕರೆದ ಶಿಕ್ಷಣ ಸಚಿವರು, ಜಿಲ್ಲಾಧಿಕಾರಿಗಳಿಂದ ವರದಿ ಪಡೆದ ನಂತರ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದರು.