Garge- ಮಗಳು ಗ್ರಾಮ ಪಂಚಾಯತ್ ಅಧ್ಯಕ್ಷೆ, ತಾಯಿ ಉಪಾಧ್ಯಕ್ಷೆ
Sunday, August 13, 2023
ಕಡೂರು : ತಾಯಿ ಮತ್ತು ಮಗಳು ಪಂಚಾಯಿತಿಯೊಂದರ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನ ಗಿಟ್ಟಿಸಿಕೊಂಡಿರುವ ಘಟನೆ ಕಡೂರು ತಾಲೂಕಿನ ಗರ್ಜೆ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದಿದೆ.
2 ನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರ ಜತೆಗೆ ಗೆಲುವು ಸಾಧಿಸಿದ ಪಂಚಾಯಿತಿಯ ಒಟ್ಟು 7 ಜನ ಸದಸ್ಯರಲ್ಲಿ ಮೊದಲಿನಿಂದಲೂ 3 ಮತ್ತು 4 ಜನ ಸದಸ್ಯರ ಎರಡು ಗುಂಪುಗಳಿದ್ದವು. ತಾಯಿ ನೇತ್ರಾವತಿ ಮತ್ತು ಮಗಳು ಸ್ನೇಹ ಬೆಂಬಲದಿಂದ ನಾಲ್ಕು ಜನರ ಗುಂಪಿನ ಎನ್.ಆರ್.ರಂಜಿತಾ ಮತ್ತು ಎಂ.ಎಲ್.ಹರೀಶ್ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದೀಗ ರಂಜಿತಾ ಮತ್ತು ಪ್ರಕಾಶ್,ನೇತ್ರಾವತಿ ಮತ್ತು ಸ್ನೇಹ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದಾಗಿ ತಾಯಿ ಮಗಳು ಅಧಿಕಾರಕ್ಕೇರಿದರು. ಬದಲಾದ ಮೀಸಲಾತಿ ಮತ್ತು 4 ಸದಸ್ಯರ ನಡುವಿನ ಒಗ್ಗಟ್ಟು ಚುನಾವಣೆಯಲ್ಲಿ ತಾಯಿ ಮಗಳು ಗೆಲುವು ಸಾಧಿಸಲು ಸಹಕಾರಿಯಾಗಿದೆ.
ಎರಡನೇ ಅವಧಿಗೆ ಗರ್ಜೆ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ನಡೆದ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಸ್ನೇಹ ಮತ್ತು ಜಿ.ಮಲ್ಲಿಕಾರ್ಜುನ್ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎನ್.ನೇತ್ರಾವತಿ ಮತ್ತು ಎಂ.ಜ್ಯೋತಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮಗಳು ಸ್ನೇಹ ಮತ್ತು ತಾಯಿ ನೇತ್ರಾವತಿ ತಲಾ ನಾಲ್ಕು ಮತಗಳನ್ನು ಪಡೆದರೆ,ಪ್ರತಿಸ್ಪರ್ಧಿಗಳಾದ ಮಲ್ಲಿಕಾರ್ಜುನ್ ಮತ್ತು ಜ್ಯೋತಿ ತಲಾ 3 ಮತಗಳನ್ನು ಪಡೆದು ಸೋತರೆ. ಸ್ನೇಹ ಮತ್ತು ನೇತ್ರಾವತಿ ತಲಾ 1 ಮತಗಳ ಅಂತರದಿಂದ ಗೆಲುವು ಸಾಧಿಸಿ ಅಧ್ಯಕ್ಷ ಮತ್ತು ಉಪಾಧ್ಯಾಕ್ಷ ಸ್ಥಾನಕ್ಕೆ ಆಯ್ಕೆಯಾದರು.ಸದಸ್ಯರಾದ ಜಿ.ಬಿ.ಹರೀಶ್ ಕುಮಾರ್ ಇದ್ದರು.
ಮಗಳು ಸ್ನೇಹ ಮತ್ತು ತಾಯಿ ನೇತ್ರಾವತಿ ಗರ್ಜೆ ಗ್ರಾಮದವರು.ಒಂದೇ ಮನೆಯಲ್ಲೇ ವಾಸ.ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಗಳು ಸ್ನೇಹ ಜಿ.ಮಾದಾಪುರ ಗ್ರಾಮದಿಂದ ಮತ್ತು ತಾಯಿ ಗರ್ಜೆಯಿಂದ ಗೆಲುವು ಸಾಸಿ ಒಂದೇ ಅವಧಿಯಲ್ಲಿ ಒಂದೇ ಮನೆಯಿಂದ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸ್ನೇಹ ಮತ್ತು ನೇತ್ರಾವತಿಗೆ ಒಲಿದು ಬಂದಿರುವುದರಿಂದ ಒಂದೇ ಮನೆಗೆ 2 ಹುದ್ದೆಗಳು ಸಿಕ್ಕಂತಾಗಿದೆ.