ಕಾಸರಗೋಡು : ಕಂದಕಕ್ಕೆ ಬಿದ್ದು ಬಾಲಕ ಸಾವು- ಘಟನೆ ನೋಡಿದ ಮಹಿಳೆಗೆ HEART ATTACK
Wednesday, August 2, 2023
ಕಾಸರಗೋಡು: ಕಂದಕದಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ್ದನ್ನು ನೋಡಿದ ನೆರೆಮನೆಯ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಬಂಗಳಂ ಹಾಲಿನ ಸೊಸೈಟಿ ಬಳಿಯ ಜಮಾ ಅತ್ ಕ್ವಾರ್ಟಸ್‌ನಲ್ಲಿ ವಾಸವಾಗಿರುವ ಸೆಬಾಸ್ಟಿನ್ ಎಂಬುವರ ಪುತ್ರ ಆಲ್ವಿನ ಸೆಬಾಸ್ಟಿನ್ (16) ಮನೆ ಪಕ್ಕದಲ್ಲೇ ಇರುವ ಕಂದಕ್ಕೆ ಈಜಾಡಲು ಇಳಿದಿದ್ದರು. ಈ ವೇಳೆ ಅವರ ತಾಯಿ ಸೇರಿದಂತೆ ಹಲವರು ಪಕ್ಕದಲ್ಲೇ ಇದ್ದರು. ನೀರಿಗಿಳಿದ ಕೆಲ ಹೊತ್ತಿನಲ್ಲಿ ಆಯತಪ್ಪಿದ ಆಲ್ವಿನ್ ಮುಳುಗಿ ಕಾಣೆಯಾಗಿದ್ದರು. ಅಗ್ನಿಶಾಮಕ ಮತ್ತು ಸ್ಥಳೀಯರ ಸಹಕಾರದಿಂದ ಶವ ಮೇಲೆತ್ತಲಾಯಿತು.
ಅಲ್ಲೇ ಇದ್ದ ನೆರೆಮನೆಯ ವಿಲಾಸಿನಿ (65) ಅವರು ಆಲ್ವಿನ್ ಅವರ ಶವ ನೋಡಿದ ಕೂಡಲೇ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ನೀಲೇಶ್ವರ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ವಿಲಾಸಿನಿ ಅವರಿಗೆ ಇಬ್ಬರು ಪುತ್ರರು ಇದ್ದಾರೆ.
ಮೂಲತಃ ಅಲಪ್ಪುಳ ನಿವಾಸಿಯಾಗಿರುವ ಸೆಬಾಸ್ಟಿನ್ ಹತ್ತು ವರ್ಷಗಳ ಹಿಂದೆ ಬಂಗಳಂನಲ್ಲಿ ನೆಲೆಸಿದ್ದಾರೆ. ಅವರು ಏರಿಕುಳಂನ ತೈಲ ಕಾರ್ಖಾನೆಯೊಂದರ ಸಿಬ್ಬಂದಿ. ಅವರ ಏಕೈಕ ಪುತ್ರ ಆಲ್ಟಿನ್ ಉಪ್ಪಲಿಕೈ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ (11ನೇ ತರಗತಿ) ವಿದ್ಯಾರ್ಥಿಯಾಗಿದ್ದ.