ಸುರತ್ಕಲ್: ಜೆಸಿಬಿ ನುಗ್ಗಿಸಿ ಎಟಿಎಂ ದರೋಡೆಗೆ ಯತ್ನ
Saturday, August 5, 2023
ಸುರತ್ಕಲ್: ಜೆಸಿಬಿ ಬಳಸಿ ಎಟಿಎಂ ದರೋಡೆಗೆ ವಿಫಲ ಯತ್ನ ಮಾಡಿರುವ ಸುರತ್ಕಲ್ ಇಡ್ಯಾ ಎಂಬಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಇಡ್ಯಾ ವಿದ್ಯಾದಾಯಿನಿ ಶಾಲೆ ಬಳಿಯ ದಿ ಸೌತ್ ಇಂಡಿಯನ್ ಬ್ಯಾಂಕ್ ನ ಎಟಿಎಂ ಹೊತ್ತೊಯ್ಯಲು ಖದೀಮರು ಯತ್ನಿಸಿದ್ದಾರೆ. ಕದ್ದ ಜೆಸಿಬಿಯನ್ನು ಬಳಸಿ ಎಟಿಎಂ ಹೊತ್ತೊಯ್ಯಲು ಯತ್ನಿಸಲಾಗಿದೆ. ಪಡುಬಿದ್ರೆಯಲ್ಲಿ ಕಳವು ಮಾಡಿದ್ದ ಜೆಸಿಬಿಯನ್ನು ಬಳಸಿ ಎಟಿಎಂಗೆ ನುಗ್ಗಿಸಲಾಗಿದೆ.
ಎಟಿಎಂ ಹೊತ್ತೊಯ್ಯುವ ಸಂದರ್ಭ ಬ್ಯಾಂಕ್ ನ ಸೆಂಟ್ರಲ್ ಸರ್ವಲೆನ್ಸ್ ಸಿಸ್ಟಂಗೆ ಮಾಹಿತಿ ಬಂದಿದೆ. ತಕ್ಷಣ ಸರ್ವಲೆನ್ಸ್ ಸಿಸ್ಟಂ ಸಿಬ್ಬಂದಿ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ್ದ ಪೊಲೀಸರನ್ನು ಕಂಡು ಖದೀಮರು ಜೆಸಿಬಿ ಬಿಟ್ಟು ಪರಾರಿಯಾಗಿದ್ದಾರೆ.
ಮೊದಲು ಈ ಖದೀಮರು ಎಟಿಎಂ ಒಡೆಯಲು ಯತ್ನಿಸಿದ್ದಾರೆ. ಈ ಎಟಿಎಂ ಮಿಷಿನ್ ಒಳಗಡೆ 3.5 ಲಕ್ಷ ರೂ. ಹಣವಿತ್ತು. ಘಟನೆ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಎಟಿಎಂನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ್ದಾರೆ.