ಪೌತಿ ಖಾತೆ ಮೂಲಕ ಖಾತೆ ಅಕ್ರಮ ಖಾತೆ: ಸರ್ಕಾರಿ ಜಮೀನು ವರ್ಗಾಯಿಸಿದ ಕೆಎಎಸ್ ಅಧಿಕಾರಿ ಬಂಧನ, ಸೇವೆಯಿಂದ ಸಸ್ಪೆಂಡ್
ಪೌತಿ ಖಾತೆ ಮೂಲಕ ಖಾತೆ ಅಕ್ರಮ ಖಾತೆ: ಸರ್ಕಾರಿ ಜಮೀನು ವರ್ಗಾಯಿಸಿದ ಕೆಎಎಸ್ ಅಧಿಕಾರಿ ಬಂಧನ, ಸೇವೆಯಿಂದ ಸಸ್ಪೆಂಡ್
ಸರ್ಕಾರಿ ಜಮೀನನ್ನು ಕೆಲವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿರುವ ಆರೋಪದಲ್ಲಿ ಕೆಎಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಧಿಕಾರಿಯನ್ನು ಜೆ. ಉಮೇಶ್ ಎಂದು ಗುರುತಿಸಲಾಗಿದೆ.
ಇದರ ಬೆನ್ನಲ್ಲೇ ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈಗ ಕಾರವಾರದಲ್ಲಿ ಸೀ ಬರ್ಡ್ ಭೂ ಸ್ವಾಧೀನ ಅಧಿಕಾರಿಯಾಗಿದ್ದ ಜೆ. ಉಮೇಶ್, 2019ರಿಂದ 2023ರ ವರೆಗೆ ಕಡೂರು ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಕಡೂರು ಪಟ್ಟಣ ಸಮೀಪದ ಉಳಿನಾಗರು ಬಳಿ ಸರ್ವೇ ನಂಬರ್ 43ರಲ್ಲಿ ಐದು ಎಕರೆಗೂ ಹೆಚ್ಚಿನ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪೌತಿ ಖಾತೆ ಮೂಲಕ ಕೆಲವು ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.
ಜೆ. ಉಮೇಶ್ ವಿರುದ್ಧ ನಿವೃತ್ತ ಶಿರಸ್ತೇದಾರ ನಂಜುಂಡಯ್ಯ, ಬೀರೂರು ಕಂದಾಯ ನಿರೀಕ್ಷಕ ಕಿರಣ್ ಕುಮಾರ್ ದೂರು ನೀಡಿದ್ದರು. ತರೀಕೆರೆ ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜು ಅವರು ಈ ದೂರನ್ನು ಪರಿಗಣಿಸಿ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಆರೋಪಿ ಕೆಎಎಸ್ ಅಧಿಕಾರಿ ಜೆ. ಉಮೇಶ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಭೂ ಕಬಳಿಕೆ ಮಾಡಿರುವ 20 ಜನರಿಗೆ ನೋಟೀಸ್ ನೀಡಿ ನ್ಯಾಯಾಲಯಕ್ಕೆ ಹಿಂಬರಹ ನೀಡಲು ಸೂಚಿಸಿದ್ದರೂ ಅದನ್ನು ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಉಳಿನಾಗರು ಗ್ರಾಮದ ಸರ್ಕಾರಿ ಜಮೀನು ಖಾಸಗಿಯವರ ಪಾಲಾಗಿರುವುದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ನೀಡಿದ ವರದಿಯ ಆಧಾರದಲ್ಲಿ ಆರೋಪಿ ಕೆಎಎಸ್ ಅಧಿಕಾರಿ ಜೆ. ಉಮೇಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.