ಮಂಗಳೂರು: ಲೋನ್ ಆ್ಯಪ್ ನಲ್ಲಿ ಸಾಲ ಮಾಡಿದಿರೋ ಹುಷಾರ್...! ಸಾಲ ಪಡೆದ ಮಹಿಳೆಗೆ ನಗ್ನ ಫೋಟೋ ವೈರಲ್ ಬೆದರಿಕೆ
Friday, August 25, 2023
ಮಂಗಳೂರು: ಲೋನ್ ಆ್ಯಪ್ ನಲ್ಲಿ ಸಾಲ ಪಡೆದಿರೋ ಹುಷಾರ್. ನಿಮ್ಮ ಎಡಿಟ್ ಮಾಡಿರುವ ನಗ್ನ ಫೋಟೊವನ್ನು ವೈರಲ್ ಮಾಡುತ್ತಾರೆ. ಇದೇ ರೀತಿ ಲೋನ್ ಆ್ಯಪ್ ಒಂದರಲ್ಲಿ ಸಾಲ ಪಡೆದ ಮಹಿಳೆಯೋರ್ವರಿಗೆ ಸಾಲವನ್ನು ಮರುಪಾವತಿಸಿದ ಬಳಿಕವು ಹೆಚ್ಚಿನ ಲೋನ್ ಪಡೆಯುವಂತೆ ಮಾಡಿ ಹಣ ಪಾವತಿಸಲು ಒತ್ತಾಯಿಸಲಾಗಿದೆ. ಹಣ ಪಾವತಿಸದಿದ್ದಲ್ಲಿ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಮಂಗಳೂರು ಸೆನ್ ಠಾಣೆಯಲ್ಲಿದೂರು ದಾಖಲಾಗಿದೆ.
ಮಹಿಳೆ ಎಪ್ರಿಲ್ 15 ರಂದು quick money ಎಂಬ ಲೋನ್ ಆ್ಯಪ್ ನಲ್ಲಿ 10,000 ರೂ. ಸಾಲಕ್ಕೆ ಮನವಿ ಮಾಡಿದ್ದರು. ತಕ್ಷಣ ಅವರ ಖಾತೆಗೆ 7500 ರೂ. ಕ್ರೆಡಿಟ್ ಆಗಿದೆ. ಮಹಿಳೆ ಸ್ವಲ್ಪ ದಿನಗಳ ಬಳಿಕ ಪೂರ್ತಿ 10,000 ರೂ. ಹಣವನ್ನು ಮರು ಪಾವತಿ ಮಾಡಿದ್ದಾರೆ.
ಆದರೆ ಆ ಬಳಿಕ ಬೇರೆ ಬೇರೆ ವಾಟ್ಸ್ಆ್ಯಪ್ ಸಂಖ್ಯೆಯಿಂದ ಮಹಿಳೆಗೆ ಕಡ್ಡಾಯವಾಗಿ ಮತ್ತೆ ಲೋನ್ ಪಡೆಯಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೆ ಆಕೆಯ ಖಾತೆಗೆ 14000 ರೂ. ಲೋನ್ ಅನ್ನು ಕ್ರೆಡಿಟ್ ಮಾಡಲಾಗಿದೆ. ಈ ಹಣವನ್ನು ಮಹಿಳೆ ಮರು ಪಾವತಿ ಮಾಡಿದ್ದಾರೆ. ಎಲ್ಲಾ ಹಣವನ್ನು ಪಾವತಿಸಿದ ಬಳಿಕವು ಮತ್ತೆ ಹೆಚ್ಚಿನ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ 51000 ರೂ. ಲೋನ್ ಮಹಿಳೆ ಖಾತೆಗೆ ವರ್ಗಾಯಿಸಿದ್ದಾರೆ.
ಅಲ್ಲದೆ ಮಹಿಳೆಗೆ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಹಣ ಹಿಂತಿರುಗಿಸುವಂತೆ ಬೆದರಿಕೆ ಹಾಕಲಾಗಿದೆ. ಅಲ್ಲದೆ ಆಕೆಯ ಫೋಟೋವನ್ನು ಯಾರದ್ದೋ ಯುವಕನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಮಹಿಳೆಗೆ ಕಳುಹಿಸಿ ಇತರರಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿಯೂ ಬೆದರಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.