ಪ್ರೇಮವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯಕ್ಕೆ ಗುಜರಾತ್ ಸರಕಾರ ಚಿಂತನೆ
Tuesday, August 1, 2023
ಗಾಂಧಿನಗರ: ಪ್ರೇಮವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸುವ ಸಾಧ್ಯತೆಯ ಬಗ್ಗೆ ಗುಜರಾತ್ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಮೆಹ್ವಾನದಲ್ಲಿ ಸರ್ದಾರ್ ಪಟೇಲ್ ಸಮುದಾಯ ನಡೆಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಪ್ರೇಮಿಸಿ ಮದುವೆಯಾಗಲು ಪ್ರಿಯಕರನೊಂದಿಗೆ ಓಡಿಹೋಗುವ ಹೆಣ್ಣುಮಕ್ಕಳ ವಿಚಾರದ ಬಗ್ಗೆ ಅಧ್ಯಯನ ನಡೆಸಲು ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಮನವಿ ಮಾಡಿದ್ದಾರೆ. ಈ ಮೂಲಕ ಇಂಥಹ ಪ್ರೇಮವಿವಾಹಗಳಿಗೆ ಪೋಷಕರ ಒಪ್ಪಿಗೆ ಕಡ್ಡಾಯ ಮಾಡುವ ವ್ಯವಸ್ಥೆ ಆರಂಭಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೆ ಸಂವಿಧಾನಾತ್ಮಕ ಬೆಂಬಲ ಇದೆ ಎಂದಾದಲ್ಲಿ, ಈ ಬಗ್ಗೆ ಅಧ್ಯಯನ ನಡೆಸಿ, ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇವೆ ಎಂದರು.
ಗುಜರಾತ್ ಸರ್ಕಾರ 2021ರಲ್ಲಿ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರನ್ವಯ ವಿವಾಹದ ಮೂಲಕ ಕಡ್ಡಾಯ ಧಾರ್ಮಿಕ ಮತಾಂತರಕ್ಕೆ ಶಿಕ್ಷೆ ವಿಧಿಸಬಹುದಾಗಿದೆ. ತಿದ್ದುಪಡಿಯಾದ ಕಾಯ್ದೆಯಲ್ಲಿ ತಪ್ಪಿತಸ್ಥರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಗುಜರಾತ್ ಹೈಕೋರ್ಟ್ ಈ ಕಾಯ್ದೆಯ ಕೆಲ ಸೆಕ್ಷನ್‌ಗಳಿಗೆ ತಡೆ ವಿಧಿಸಿದೆ. ಇದನ್ನು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅಲ್ಲಿ ವಿಚಾರಣೆಗೆ ಬಾಕಿ ಇದೆ.