ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮದುವೆಯನ್ನೇ ಮುರಿದ ತುಮಕೂರಿನ ವಧು
Monday, August 28, 2023
ತುಮಕೂರು: ಇನ್ನೇನು ವರ ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ವಧು ಮದುವೆಯೇ ಬೇಡವೆಂದು ಹಸೆಮಣೆಯಿಂದ ಮೇಲೆದ್ದು ಹೋಗಿರುವ ನಾಟಕೀಯ ಪ್ರಸಂಗ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದಲ್ಲಿ ಘಟನೆ ನಡೆದಿದೆ.
ಇದೀಗ ಮದುವೆ ಅರ್ಧಕ್ಕೆ ಮುರಿದುಬಿದ್ದಿದೆ. ದಿವ್ಯಾ ಎಂಬ ವಧು, ತಾನು ಬೇರೆ ಯುವಕನನ್ನು ಪ್ರೀತಿಸುತ್ತಿದ್ದೇನೆ. ಆದ್ದರಿಂದ ತನಗೆ ಮದುವೆ ಬೇಡವೆಂದು ಕಲ್ಯಾಣ ಮಂಟಪದಿಂದ ಹೊರನಡೆದಿದ್ದಾಳೆ.
ಕೊಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ನಲ್ಲಿ ದಿವ್ಯಾ ಮದುವೆ ವರ ವೆಂಕಟೇಶ್ ನೊಂದಿಗೆ ನಡೆಯುತ್ತಿತ್ತು. ಮದುವೆಗೆ ಹಿಂದಿನ ರಾತ್ರಿ ರಿಸೆಪ್ಷನ್ನಲ್ಲಿ ದಿವ್ಯಾ, ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದಳು. ಆದರೆ, ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದಿದ್ದಾಳೆ.
ವಧು ಮದುವೆ ಬೇಡ ಅಂತ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದೆ. ಎರಡು ಕಡೆಯ ಹಿರಿಯರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸದ್ಯ ಕೊಳಾಲ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದೆ.