ಧರ್ಮಸ್ಥಳ ದ್ವಾರದ ಬಳಿ ನೈತಿಕ ಪೊಲೀಸ್ ಗಿರಿ- ಅಟೋ ಚಾಲಕ ಆಸ್ಪತ್ರೆಗೆ ದಾಖಲು
Thursday, August 3, 2023
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಮತ್ತೆ ನೈತಿಕ ಪೊಲೀಸ್ ಗಿರಿ ಮುಂದುವರಿದಿದ್ದು, ನಿನ್ನೆ ರಾತ್ರಿ ( ಆ. 2) ಧರ್ಮಸ್ಥಳ ದ್ವಾರದ ಬಳಿಯ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ದ್ವಾರದ ಬಳಿ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ.
ನಿನ್ನೆ ರಾತ್ರಿ ಆಟೋ ಚಾಲಕ ತನ್ನ ಆಟೋದಲ್ಲಿ ಹಿಂದು ಹುಡುಗಿ ಕೂರಿಸಿಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22) ಮೇಲೆ ಹಲ್ಲೆ ನಡೆಸಲಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಶಿಕ್ ಆಟೋ ಚಾಲಕನಾಗಿದ್ದು ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಉಜಿರೆ ಆಟೋ ನಿಲ್ದಾಣದಲ್ಲಿದ್ದರು. ಈ ವೇಳೆ ಅಲ್ಲಿಗೆ ಎಸ್ ಡಿಎಂ ಕಾಲೇಜಿನ ಬೆಂಗಳೂರು ಮೂಲದ ವಿದ್ಯಾರ್ಥಿನಿ ಬಂದಿದ್ದು, ಆಶಿಕ್ ನ ಆಟೋ ಹತ್ತಿದ್ದಾರೆ. ಅವರು ಧರ್ಮಸ್ಥಳದಿಂದ ಬೆಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಸಂಚರಿಸಬೇಕಿತ್ತು. ಆದ್ದರಿಂದ ಯುವತಿ ಆಶಿಕ್ ಬಳಿ ಧರ್ಮಸ್ಥಳಕ್ಕೆ ತೆರಳುವಂತೆ ಹೇಳಿದ್ದಾರೆ. ಅದರಂತೆ ಆಶಿಕ್ ಆಟೋವನ್ನು ಧರ್ಮಸ್ಥಳಕ್ಕೆ ಚಲಾಯಿಸಿ ಬಸ್ ನಿಲ್ದಾಣದ ಬಳಿ ಆಟೋ ನಿಲ್ಲಿಸಿ ಲಗೇಜ್ ಇಳಿಸುತ್ತಿದ್ದರು.
ಈ ವೇಳೆ ಬೈಕ್ ನಲ್ಲಿ ಬಂದ ನಾಲ್ವರು ಹಿಂದೂ ಯುವಕರ ಗುಂಪೊಂದು ಆಶಿಕ್ ನನ್ನು ಪ್ರಶ್ನಿಸಿ "ಹಿಂದೂ ಯುವತಿಯನ್ನು ಈ ರಾತ್ರಿಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯ" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉಡುಪಿ ಯಲ್ಲಿ ನಿನ್ನೆ ನಡೆದಿತ್ತು ನೈತಿಕ ಪೊಲೀಸ್ ಗಿರಿ
ಉಡುಪಿ ಜಿಲ್ಲೆಯಲ್ಲಿ ನಿನ್ನೆ ನೈತಿಕ ಪೊಲೀಸ್ ಗಿರಿ ನಡೆದಿತ್ತು.
ಕಾರಿನಲ್ಲಿ ಹೋಗುತ್ತಿದ್ದ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ಅಡ್ಡಗಟ್ಟಿ
ನೈತಿಕ ಪೊಲೀಸ್‌ಗಿರಿ ನಡೆಸಿದ ಐವರು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿದ
ಘಟನೆ ಕಾರ್ಕಳದಲ್ಲಿ ಸಂಭವಿಸಿತ್ತು.
ಮಂಗಳೂರಿನ ಕಾಲೇಜೊಂದರ ನಾಲ್ವರು ವೈದ್ಯರು ಮತ್ತು ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಆರೋಪಿಗಳು ಇವರ ಕಾರನ್ನು ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ.ಈ ವೇಳೆ ಕಾರಿನಲ್ಲಿದ್ದ ಮಹಿಳೆಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಂಗಳೂರಿನಿಂದ ಶೃಂಗೇರಿಗೆ ತೆರಳಿ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದವರನ್ನು ವಿಭಿನ್ನ ಕೋಮಿನವರು ಎಂದು ತಿಳಿದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಚಿತ್ ಸಫಲಿಗ ಆರೋಪಿಗಳು.
ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಮಂಗಳೂರಿನಲ್ಲಿ ಪೊಲೀಸರು ಮತ್ತು ಪತ್ರಕರ್ತರ ಮೇಲೂ ಪೊಲೀಸ್ ಗಿರಿ
ಮಂಗಳೂರಿನಲ್ಲಿ ಇತ್ತೀಚೆಗೆ ಪತ್ರಕರ್ತರೊಬ್ಬರ ಮೇಲೂ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಹಿಂದೂ ಧರ್ಮದ ಯುವತಿಯನ್ನು ಹಿಂದೂ ಧರ್ಮಕ್ಕೆ ಸೇರಿದ ಪತ್ರಕರ್ತನನ್ನು ಮುಸ್ಲಿಂ ಎಂದು ಭಾವಿಸಿ ಹಲ್ಲೆಗೆ ಯತ್ನಿಸಲಾಗಿತ್ತು.ಅದೇ ರೀತಿ ತನ್ನ ಪತ್ನಿ ಮತ್ತು ನಾದಿನಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಹಿಂದೂ ಧರ್ಮಕ್ಕೆ ಸೇರಿದ ಪೊಲೀಸ್ ಸಿಬ್ಬಂದಿಯನ್ನು ಮುಸ್ಲಿಂ ಎಂದು ಭಾವಿಸಿ ಹಲ್ಲೆ ಮಾಡಲಾಗಿತ್ತು.