ಮೂಡಬಿದಿರೆ: ಸಹಪಾಠಿಯೊಂದಿಗೆ ಮಾತನಾಡಿದ ಅನ್ಯಕೋಮಿನ ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ- ಮೂವರು ಅರೆಸ್ಟ್
Wednesday, August 23, 2023
ಮೂಡುಬಿದಿರೆ: ಇಲ್ಲಿನ ಬಸ್ ಸ್ಟ್ಯಾಂಡ್ ಬಳಿ ಸಹಪಾಠಿಯೊಂದಿಗೆ ಮಾತನಾಡಿದ ಅನ್ಯಕೋಮಿನ ವಿದ್ಯಾರ್ಥಿಯ ಮೇಲೆ ಯುವಕರ ಗುಂಪೊಂದು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದೆ. ಇದೀಗ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯ್, ಅಭಿಲಾಷ್, ಸಂಜಯ್ ಬಂಧಿತ ಆರೋಪಿಗಳು. ಹಿಂದೂ ಸಹಪಾಠಿಯೊಂದಿಗೆ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮೂವರು ಯುವಕರ ಗುಂಪು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಮುಸ್ಲಿಂ ವಿದ್ಯಾರ್ಥಿ ದೂರು ನೀಡಿದ್ದಾನೆ.
ಸೋಮವಾರ ರಾತ್ರಿ ಮೂಡುಬಿದಿರೆಯ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದ ಮುಂಭಾಗ ಊರಿಗೆ ಹೋಗಲೆಂದು ಬಸ್ ಕಾಯುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಆಕೆಯ ಸಹಪಾಠಿ, ಕೋಟೆ ಬಾಗಿಲು ನಿವಾಸಿ ವಿದ್ಯಾರ್ಥಿ ಮಾತನಾಡಿದ್ದಾನೆ. ಇಬ್ಬರೂ ಮೂಡುಬಿದಿರೆಯ ಕಾಲೇಜಿನಲ್ಲಿ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬಸ್ಸು ಬಂದ ಬಳಿಕ ವಿದ್ಯಾರ್ಥಿನಿ ಬಸ್ ಹತ್ತಿ ಹೋಗಿದ್ದಾಳೆ. ಆದರೆ ಅಲ್ಲೇ ಇದ್ದ ಆರೋಪಿಗಳು ಮಾತನಾಡಿದ್ದು, ಅನ್ಯಕೋಮಿನವ ಎನ್ನುವ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಆ ವಿದ್ಯಾರ್ಥಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ತನಿಖೆ ನಡೆಸಿದ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.