ಮಂಗಳೂರು: ಶಾಲೆಗೆ ರಜೆ ಕೊಡ್ತೀರಾ ಸರ್ ಎಂದು ಮಕ್ಕಳೇ ನಡುರಾತ್ರಿ ಕಾಲ್ ಮಾಡ್ತಾರೆ - ಜಿಲ್ಲಾಧಿಕಾರಿ ವೀಡಿಯೋ ವೈರಲ್
Friday, August 4, 2023
ಮಂಗಳೂರು: ನಡುರಾತ್ರಿಗೆ ಮಕ್ಕಳೇ ಕಾಲ್ ಮಾಡ್ತಾರೆ...! ಶಾಲೆಗೆ ರಜೆ ಕೊಡ್ತೀರಾ ಸರ್ ಎಂದು ಕೇಳ್ತಾರೆ. ರಾತ್ರಿಯಿಡೀ ಕಾಲ್ ಮಾಡ್ತಾರೆ. ಎಷ್ಟು ಚಂದ ಮಾತನಾಡ್ತಾರಂದ್ರೆ ನಮಗೇ ರಜೆ ಕೊಡಬೇಕು ಅನಿಸಬೇಕು ಅಷ್ಟು ಚೆನ್ನಾಗಿ ಮಾತನಾಡ್ತಾರೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಸ್ಯವಾಗಿ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.
ರಾತ್ರಿಪೂರ್ತಿ ಕರೆ ಮಾಡ್ತಾರೆ. ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕರೆ ಮಾಡ್ತಾರೆ. ಮಳೆ ಬರುವ ಸಂದರ್ಭ ಆದ್ದರಿಂದ ಎಲ್ಲವೂ ಎಮರ್ಜೆನ್ಸಿ ಕರೆ ಎಂದು ಕರೆ ಸ್ವೀಕರಿಸಿದ್ರೆ, ಅದೆಲ್ಲವೂ ನಮ್ಮಲ್ಲಿ ರಜೆ ಉಂಟಾ... ಎಂಬ ಕರೆಗಳೆ. ಚಂದ ಇಂಗ್ಲಿಷ್ ನಲ್ಲಿ ಮಾತನಾಡ್ತಾರೆ. ನನಗಿರುವ ಮಾಹಿತಿ ಟೀಚರ್ ಗಳೇ ಈ ಕರೆ ಮಾಡಿಸ್ತಾರೆ ಎಂಬುದು. ಪಿಯು ಮಕ್ಕಳಿಗೆ ರಜೆ ಕೊಟ್ಟಿದ್ದೀರಿ ಟೆಕ್ನಿಕಲ್, ಇಂಜಿನಿಯರಿಂಗ್ ಕಾಲೇಜ್ ಗೆ ಕೊಟ್ಟಿಲ್ಲ ಎಂಬ ಕರೆಗಳೂ ಬರುತ್ತಿತ್ತು ಎಂದು ಡಿಸಿ ಹೇಳಿದರು.
ಇದೇ ವೇಳೆ ಸುದ್ದಿಗಾರರು ಡಿಸಿಯವರ ಹೆಸರು ಮುಲ್ಲೈ ಮುಗಿಲನ್ ಪದದ ಅರ್ಥವೇನೆಂದು ಕೇಳಿದರು. ಆಗ ಆ ಪದದ ಅರ್ಥ ವಿವರಿಸಿದ ಜಿಲ್ಲಾಧಿಕಾರಿಯವರು "ತಮಿಳುಭಾಷೆಯಲ್ಲಿ ಮುಲ್ಲೈ ಎಂದರೆ ಒಣಕಾಡು. ಮುಹಿಲನ್ ಅಂದರೆ ಮೋಡ. ನಾನು ಕನ್ನಡದಲ್ಲಿ ಮುಗಿಲು ಎಂಬ ಸಮಾನ ಅರ್ಥ ಬರುವಂತೆ ಮುಗಿಲನ್ ಮಾಡಿಕೊಂಡಿದ್ದೇನೆ. ಇದು ಎಲ್ಲರಿಗೂ ಸರಳವಾಗಿ ಅರ್ಥವಾಗುತ್ತದೆ" ಎಂದು ಹೇಳಿದರು.