ಪುತ್ತೂರು: ಹಾಡಹಗಲೇ ನಡುರಸ್ತೆಯಲ್ಲಿ ಕತ್ತು ಸೀಳಿ ಪ್ರೇಯಸಿಯನ್ನು ಕೊಲೆಗೈದ ಪಾಗಲ್ ಪ್ರೇಮಿ - ಆರೋಪಿ ಅರೆಸ್ಟ್
Thursday, August 24, 2023
ಪುತ್ತೂರು: ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿ ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಪ್ರೇಯಸಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.
ಪುತ್ತೂರಿನ ವಸ್ತ್ರಮಳಿಗೆಯಲ್ಲಿ ಕೆಲಸಕ್ಕಿದ್ದ ಬಂಟ್ವಾಳದ ಅಳಿಕೆ ಗ್ರಾಮದ ಗೌರಿ(25) ಕೊಲೆಯಾದ ಯುವತಿ. ಆರೋಪಿ ಪದ್ಮರಾಜ್(30) ಹತ್ಯೆ ಮಾಡಿದ ಪಾಗಲ್ ಪ್ರೇಮಿ.
ಈ ಮೂಲಕ ಪ್ರೇಮಿಗಳ ಗಲಾಟೆ ಯುವತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮಟಮಟ ಮಧ್ಯಾಹ್ನದ ವೇಳೆಯೇ ಪ್ರೇಮಿ ಯುವತಿಯ ಕತ್ತು ಸೀಳಿದ್ದಾರೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ ಕೆಲವೇ ನಿಮಿಷದಲ್ಲಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಪದ್ಮರಾಜ್ ಮತ್ತು ಗೌರಿ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಗಲಾಟೆ ಮಾಡಿಕೊಂಡಿದ್ದರು. ಹಲವು ಬಾರಿ ಗಲಾಟೆ ತಾರಕಕ್ಕೇರಿ ಪ್ರಕರಣ ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.
ಇಂದೂ ಪುತ್ತೂರು ಬಸ್ ನಿಲ್ದಾಣದ ಬಳಿ ಗೌರಿ ಹಾಗೂ ಪದ್ಮರಾಜ್ ಜಗಳವಾಡಿಕೊಂಡಿದ್ದಾರೆ. ಜಗಳ ಅತಿರೇಕಕ್ಕೆ ತಿರುಗಿ ಗೌರಿ ಮಹಿಳಾ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಈ ವೇಳೆ ಠಾಣೆಯ ಮುಂಭಾಗವೇ ಗೌರಿ ಮತ್ತು ಪದ್ಮರಾಜ್ ಜಗಳವಾಡಿಕೊಂಡಿದ್ದಾರೆ. ಜಗಳ ತಾರಕಕ್ಕೇರಿ ರೊಚ್ಚಿಗೆದ್ದ ಪದ್ಮರಾಜ್ ಯುವತಿ ಗೌರಿಯ ಕತ್ತು ಸೀಳಿದ್ದಾನೆ. ಮೂರರಿಂದ ನಾಲ್ಕು ಬಾರಿ ಯುವತಿಯ ಕತ್ತಿಗೆ ಚೂರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪದ್ಮರಾಜ್ ಕಾಲ್ಕಿತ್ತಿದ್ದಾನೆ.
ಇತ್ತ ಗಂಭೀರವಾಗಿ ಗಾಯಗೊಂಡ ಗೌರಿಯನ್ನು ಸ್ಥಳೀಯರು ಕೂಡಲೇ ಪುತ್ತೂರು ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಗಂಭೀರ ಸ್ವರೂಪದ ಗಾಯ ಹಿನ್ನಲೆಯಲ್ಲಿ ಮಂಗಳೂರು ಆಸ್ಪತ್ರೆ ಗೆ ರವಾನಿಸುವಾಗ ಗೌರಿ ದಾರಿ ಮಧ್ಯೆ ಕೊನೆಯುಸಿರೆಳಿದಿದ್ದಾರೆ.ಪುತ್ತೂರು ಘಟನಾ ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಸಿ.ಬಿ ಭೇಟಿ ನೀಡಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.