Nelyadi:- ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಡಕ್ಕೆ ಕುಸಿದು ಬಿದ್ದ ವೈದ್ಯಾಧಿಕಾರಿಗೆ ಗರ್ಭಪಾತ! ಪೊಲೀಸ್ ದೂರು ನೀಡಿದ ವೈದ್ಯರ ಸಂಘ..
Tuesday, August 15, 2023
ನೆಲ್ಯಾಡಿ
ಗ್ರಾಮಸಭೆಯಲ್ಲಿ ಗ್ರಾಮಸ್ಥರ ಮಾನಸಿಕ ಒತ್ತಡದಿಂದ ತೀವ್ರ ಮಾನಸಿಕ ಹಿಂಸೆಗೆ ಒಳಗಾಗಿ ಕುಸಿದುಬಿದ್ದ ವೈದ್ಯಾಧಿಕಾರಿಯೊಬ್ಬರಿಗೆ ಗರ್ಭಪಾತವಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪೊಲೀಸ್ ದೂರು ನೀಡಿದೆ.
ಕಡಬ ತಾಲೂಕಿನ ಗೊಳಿತ್ತೊಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಸಮರ್ಪಕ ಸ್ಪಷ್ಟನೆ ನೀಡಿದರೂ, ಮತ್ತೆ ಮತ್ತೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ವಿಚಲಿತರಾದ ಮಹಿಳಾ ವೈದ್ಯಾಧಿಕಾರಿಯೋರ್ವರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಎಂಬಲ್ಲಿ ನಡೆದಿತ್ತು. ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ ಅವರ ಅಧ್ಯಕ್ಷತೆಯಲ್ಲಿ ಈ ಗ್ರಾಮ ಸಭೆ ನಡೆದಿತ್ತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಶಿಶಿರಾ ಅವರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಾಧಿಕಾರಿಗಳ ಬಳಿ ಎಪ್ರಿಲ್ ತಿಂಗಳಲ್ಲಿ ಇಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ಮಮತಾ ಅವರ ಸಾವಿನ ಬಗ್ಗೆ ಗ್ರಾಮಸ್ಥರೋರ್ವರ ಪ್ರಶ್ನೆ ಮಾಡಿದ್ದಾರೆ. ಅವರನ್ನು ತನ್ನ ಬಳಿ ಕರೆ ತಂದಾಗಲೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ನಾನು ಅವರನ್ನು ಪುತ್ತೂರಿಗೆ ಕಳುಹಿಸಿದ್ದೆ. ನನ್ನಿಂದ 20 ನಿಮಿಷದ ಅವಧಿಯಲ್ಲಿ ಏನೆಲ್ಲಾ ಪ್ರಥಮ ಚಿಕಿತ್ಸೆ ನೀಡಬೇಕೋ ಅದನ್ನು ನೀಡಿದ್ದೇನೆ ಎಂದು ವೈದ್ಯರು ಹೇಳಿದ್ದರೂ ತಮಗೆ ವಿದ್ಯಾರ್ಥಿನಿ ಹೇಗೆ ಸತ್ತದೆಂದು ಸ್ಪಷ್ಟ ಕಾರಣ ಬೇಕು ಎಂದ ಗ್ರಾಮಸ್ಥ ಡೀಕಯ್ಯ ಪೂಜಾರಿ ಅವರು ಹೇಳಿದರು. ವಿದ್ಯಾರ್ಥಿನಿ ಹೇಗೆ ಮೃತಪಟ್ಟಳು ಎಂದು ತಿಳಿಯುವ ಪ್ರಯತ್ನವನ್ನು ನೀವು ಯಾಕೆ ಮಾಡಿಲ್ಲ? ಅವರು ಬಡವರೆಂದು ಈ ರೀತಿ ಮಾಡಲಾಯಿತೇ ಎಂಬುದಾಗಿ ಹಲವಾರು ಪ್ರಶ್ನೆಗಳನ್ನು ಗ್ರಾಮಸ್ಥರು ಕೇಳಿದರು. ವೈದ್ಯಾಧಿಕಾರಿಯ ಯಾವುದೇ ಸಮಜಾಷಿಕೆಗೆ ಅಂದು ಗ್ರಾಮಸ್ಥರು ಮನ್ನಣೆ ನೀಡದೇ ವೈದ್ಯಾಧಿಕಾರಿಯ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದಾರೆ ಎನ್ನಲಾಗಿತ್ತು.
ಇದರಿಂದಾಗಿ ವಿಚಲಿತರಾದ ಮಹಿಳಾ ವೈದ್ಯಾಧಿಕಾರಿ ಶಿಶಿರಾ ಅವರು ಅಲ್ಲೇ ಟೇಬಲ್ ಮೇಲಿನಿಂದ ಒಂದು ಲೋಟ ನೀರು ಕುಡಿದು ಸಭಾಂಗಣದಿಂದ ಹೊರ ನಡೆದರು. ನಂತರದಲ್ಲಿ ಗ್ರಾ.ಪಂ. ಕೊಠಡಿಯೊಳಗೆ ತೆರಳುತ್ತಲೇ ಅವರು ಅಲ್ಲೇ ನೆಲದ ಮೇಲೆ ಕುಸಿದು ಬಿದ್ದರು.
ತಕ್ಷಣವೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂದು ಈಟಿವಿ ಭಾರತದ ಜೊತೆಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು, ಪ್ರಸ್ತುತ ಶಿಶಿರಾ ಅವರಿಗೆ ಸರ್ಜರಿ ಮಾಡಲಾಗಿದ್ದು,ಅವರ ಆರೋಗ್ಯ ಸುಧಾರಣೆ ಕಂಡುಬರುತ್ತಿದ್ದು, ಅವರಿಗೆ ಎಕ್ಟೋಪಿಕ್ ಪ್ರೆಗ್ನೆನ್ಸಿ ಸಮಸ್ಯೆ ಇತ್ತು ಎಂದು ತಿಳಿಸಿದ್ದರು.ಅತೀ ಹೆಚ್ಚು ಮಾನಸಿಕ ಒತ್ತಡ ಆದಾಗ ರಕ್ತದೊತ್ತಡ ಹೆಚ್ಚಾಗಿ ಅಥವಾ ಕಡಿಮೆಯಾಗಿ ಆರೋಗ್ಯದಲ್ಲಿ ಸಮಸ್ಯೆ ಎದುರಾಗಿರಬಹುದು. ಅವರಿಗೆ ಎಮರ್ಜೆನ್ಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಿದ್ದರು.
ಆಸ್ಪತ್ರೆಗೆ ಡಾ.ಶಿಶಿರಾ ಅವರನ್ನು ದಾಖಲಿಸಿದ ವೇಳೆ ಗರ್ಭಪಾತವಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ವೆಂಟಿಲೇಟರ್‌ನಲ್ಲಿರುವ ಡಾ.ಶಿಶಿರಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹೀಗಾಗಿ ಡೀಕಯ್ಯ ಪೂಜಾರಿ ಮತ್ತು ಗಣೇಶ್ ಎಂಬವರ ವಿರುದ್ಧ ವಿರುದ್ದ ಪೊಲೀಸ್ ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ದ.ಕ ಜಿಲ್ಲಾ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಗ್ರಾಮಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.