ಮಂಗಳೂರು: ದ.ಕ.ಜಿಲ್ಲೆಯಲ್ಲಿ ಎನ್ಐಎ ದಾಳಿ - ಧಾರ್ಮಿಕ ಶಿಕ್ಷಕನ ಮನೆ ಸೇರಿದಂತೆ ಮೂರುಕಡೆಗಳಲ್ಲಿ ಶೋಧ
Sunday, August 13, 2023
ಮಂಗಳೂರು: ನಿಷೇಧಿತ ಪಿಎಫ್ಐ ಸಂಘಟನೆಗೆ ವಿದೇಶದಿಂದ ಫಂಡಿಗ್ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ದ.ಕ.ಜಿಲ್ಲೆಯ ಉಳ್ಳಾಲದ ಕಿನ್ಯಾ, ವಳಚ್ಚಿಲ್ ಪದವು ಮತ್ತು ಮೆಲ್ಕಾರ್ ನಲ್ಲಿ ಎನ್ಐಎ ದಾಳಿ ನಡೆಸಿದೆ.
ಮೆಲ್ಕಾರ್ ನ ಇಬ್ರಾಹಿಂ ನಂದಾವರ ಎಂಬಾತನ ಮನೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈತ ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದು ಪಿಎಫ್ಐ ಬ್ಯಾನ್ ಬಳಿಕ ತಲೆಮರೆಸಿಕೊಂಡಿದ್ದ. ಇದೀಗ ಇಬ್ರಾಹಿಂ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಎನ್ಐಎ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಇಬ್ರಾಹಿಂ ಮನೆಯಲ್ಲಿ ಇರಲಿಲ್ಲ. ಕೆಲ ಸಮಯಗಳ ಎನ್ಐಎ, ನಿಷೇಧಿತ ಪಿಎಫ್ಐ ಸಂಘಟನೆಯ ಫಂಡಿಂಗ್ ನೆಟ್ವರ್ಕ್ ಅನ್ನು ಬೇಧಿಸಿತ್ತು. ಈ ವೇಳೆ ಬಂಧಿತರನ್ನು ವಿಚಾರಣೆ ನಡೆಸಿದಾಗ ಇಬ್ರಾಹಿಂ ಹೆಸರು ಪ್ರಸ್ತಾಪವಾಗಿತ್ತು. ಪಿಎಫ್ಐ ಫಂಡಿಂಗ್ ನೆಟ್ವರ್ಕ್ ಗೆ ಇಬ್ರಾಹಿಂ ಲಿಂಕ್ ಇದೆ ಎಂಬುದು ತಿಳಿದು ಬಂದಿದೆ.
ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಅನ್ನು ಬೇಧಿಸಿರುವ ಎನ್ಐಎ ಅಧಿಕಾರಿಗಳು ಮಂಗಳೂರು ಹೊರವಲಯದ ವಳಚ್ಚಿಲ್ ಪದವು ಮತ್ತು ಬಂಟ್ವಾಳದ ಮಲ್ಕಾರ್ ಎಂಬಲ್ಲಿಯೂ ದಾಳಿ ನಡೆಸಿದ್ದಾರೆ. ವಳಚ್ಚಿಲ್ ನಲ್ಲಿ ಮುಸ್ತಾಕ್ ಮನೆ ಮೇಲೆ ಎನ್ಐಎ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
*ಐದು ರಾಜ್ಯಗಳ 14 ಕಡೆಗಳಲ್ಲಿ ಏಕಕಾಲಕ್ಕೆ ಎನ್ಐಎ ದಾಳಿ*
ಎನ್ಐಎ ಅಧಿಕಾರಿಗಳು ಏಕಕಾಲದಲ್ಲಿ ದೇಶದ ಐದು ರಾಜ್ಯಗಳ 14 ಕಡೆಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಕರ್ನಾಟಕ , ಮಹಾರಾಷ್ಟ್ರ , ಕೇರಳ , ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯದಲ್ಲಿ ಏಕಕಾಲದಲ್ಲಿ ಎನ್ಐಎ ದಾಳಿ ನಡೆಸಿದೆ. ಇದರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕೇರಳದ ಕಣ್ಣೂರು, ಮಲ್ಲಪ್ಪುರಂ, ಮಹಾರಾಷ್ಟ್ರದ ನಾಸಿಕ್, ಕೊಲ್ಲಾಪುರ ಹಾಗೂ ಮುರ್ಷಿದಾಬಾದ್, ಕತಿಹಾರ್ ಗಳಲ್ಲಿ ದಾಳಿ ನಡೆಸಿದೆ.
ಪಿಎಫ್ಐ ಸಂಘಟನೆಗಳ ಉಗ್ರಚಟುವಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ಶಂಕೆಯಲ್ಲಿ ಈ ದಾಳಿ ನಡೆದಿದೆ. 2047ರ ಇಸವಿಯೊಳಗೆ ಭಾರತದಲ್ಲಿ ಪಿಎಫ್ಐ ಆರ್ಮಿ ಸ್ಥಾಪಿಸಲು ಮುಂದಾಗಿದ್ದ ಶಂಕೆಯ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ಯುವಕರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ಈ ಶಸ್ತ್ರಾಸ್ತ್ರ ತರಬೇತಿಯಲ್ಲಿ ಐರನ್ ರಾಡ್ಸ್ , ಕತ್ತಿಗಳ ತರಬೇತಿ ಕೂಡ ನಡೆಸಿರುವ ಬಗ್ಗೆ ಎನ್ಐಎ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ. ಇದರನ್ವಯ ಎನ್ಐಎ ಕೆಲವು ಪಿಎಫ್ಐ ಏಜೆಂಟರನ್ನು ಬಂಧಿಸಿದೆ. ಎನ್ಐಎ ಈ ಹಿಂದೆ ಪಿಎಫ್ಐಯ 19 ಮಂದಿಯ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆ ಮಾಡಿತ್ತು.